ತೊರವಿ ಗ್ರಾಮ ಪಂಚಾಯತಿಗೆ ಜಿಪಂ ಸಿಇಒ ರಿಷಿ ಆನಂದ್ ಭೇಟಿ
ವಿಜಯಪುರ: ಯುವಕರನ್ನು ಸಂಘಟಿಸಿ, ಅವರ ಶಕ್ತಿ, ಪ್ರತಿಭೆ ಹಾಗೂ ನಾಯಕತ್ವ ಗುಣಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವುದೇ ‘ಭಾರತ್ ಜೋಡೋ ಯುವ ಸಂಘ’ ಯೋಜನೆಯ ಗುರಿಯಾಗಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ‘ಭಾರತ್ ಜೋಡೋ ಯುವ ಸಂಘ’ದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹೇಳಿದರು.
ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿಗೆ ಶುಕ್ರವಾರ ಭೇಟಿ ನೀಡಿ ಭಾರತ ಜೋಡೋ ಯುವ ಸಂಘ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಸಂಘದ ನೋಂದಣಿ ಪ್ರಕ್ರಿಯೆ, ಯೋಜನೆಯ ಉದ್ದೇಶ, ಯುವಕರಿಗೆ ದೊರೆಯುವ ಅವಕಾಶಗಳು ಹಾಗೂ ಸಂಘದ ಮೂಲಕ ಕೈಗೊಳ್ಳಬಹುದಾದ ವಿವಿಧ ಸಮಾಜಮುಖಿ ಚಟುವಟಿಕೆಗಳ ಕುರಿತು ಯುವಕರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಯುವಕರು ಕೇವಲ ಯೋಜನೆಯ ಫಲಾನುಭವಿಗಳಾಗದೆ, ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಯ ಸಕ್ರಿಯ ಪಾಲುದಾರರಾಗಬೇಕು. ವಿವಿಧ ಜಾತಿ, ಧರ್ಮ ಹಾಗೂ ಸಮುದಾಯಗಳ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಸೌಹಾರ್ದ, ಸಹೋದರತ್ವ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಭಾರತ್ ಜೋಡೋ ಯುವ ಸಂಘ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶ್ರೀ ತುಂಗಳ, ಸಿಬ್ಬಂದಿ ಹಾಗೂ ಯುವಕರು ಉಪಸ್ಥಿತರಿದ್ದರು.

