ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧ | ಎಡದಂಡೆ ನಾಲೆಗೆ ನೀರು ಹರಿಸುವಂತೆ ರೈತರ ಬೃಹತ್ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿರುವಾಗಲೇ ಇತ್ತ ಹೆಚ್ ಡಿ ಕೋಟೆ ತಾಲೂಕಿನಲ್ಲಿ ಕಬಿನಿ ಕಿಚ್ಚು ಹೊತ್ತಿ ಉರಿಯಲು ಶುರುವಾಗಿದೆ. ಕಬಿನಿ ಜಲಾಶಯವೊಂದರಿಂದಲೇ ತಮಿಳುನಾಡಿಗೆ 14 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದನ್ನು ವಿರೋಧಿಸಿ, ಹಾಗೂ ಅವಳಿ ಕಬಿನಿ ಎಡದಂಡೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ, ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಕಾರ್ಯಪಾಲಕ ಅಭಿಯಂತರ ಮುಖ್ಯ ಕಚೇರಿ ಎದುರು ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಕಬಿನಿ ಕಾರ್ಯಪಾಲಕ ಅಭಿಯಂತರರ ಮುಖ್ಯ ಕಚೇರಿ ಎದುರು ಜಮಾಯಿಸಿದ ತಾಲೂಕಿನ ಎಚ್ ಮಟಕೆರೆ, ಹೆಬ್ಬಲಗುಪ್ಪೆ, ಹುಲಿಕುರ, ತೊರವಳ್ಳಿ, ಇಟ್ನಾ, ತುಂಬಸೋಗೆ, ನಿಲುವಾಗಿಲು, ನೇರಳೆ, ಮಾಗುಡಿಲು, ಪುರ ಸೇರಿದಂತೆ ಎಡದಂಡೆ ನಾಲೆ ವ್ಯಾಪ್ತಿಯ ರೈತರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಬಿನಿ ನೀರು ಬಿಡುಗಡೆ ಮಾಡಬಾರದು. ಸುಪ್ರೀಂಕೋರ್ಟ್ ಆದೇಶ ಹಾಗೂ ಕಾವೇರಿ ನೀರಾವರಿ ನಿಗಮದ ಆದೇಶದ ಅನ್ವಯ ತಮಿಳುನಾಡಿಗೆ ಕಬಿನಿ ಜಲಾಶಯವೊಂದರಿಂದಲೇ ನೀರು ಹರಿಸುತ್ತಿರುವುದು ಸರಿಯಲ್ಲ. ಮೊದಲೇ ಮಳೆ ಕೊರತೆಯಿಂದ ಅವಳಿ ತಾಲೂಕಿನ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೇರಳದ ವಯನಾಡಿನಲ್ಲಿ ಸುರಿದ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಹೊರ ಹರಿವು ಹರಿದುಬರುತ್ತಿದೆ. ಆದರೆ ಇದೀಗ ವಯನಾಡಿನಲ್ಲೂ ಮಳೆ ಇಲ್ಲದ ಹಿನ್ನೆಲೆ ಕಬಿನಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಕೇವಲ 6 ಸಾವಿರ ಕ್ಯೂಸೆಕ್ ನೀರಷ್ಟೇ ಹರಿದುಬರುತ್ತಿದೆ. ಆದರೆ ಹೊರಹರಿವು ಪ್ರಮಾಣ ದುಪ್ಪಟು ಆಗಿದೆ. ಪ್ರತಿನಿತ್ಯ ತಮಿಳುನಾಡಿಗೆ 14 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿರುವುದರಿಂದ ಕಬಿನಿ ಜಲಾಶಯ ಖಾಲಿಯಾಗುತ್ತಾ ಬರುತ್ತಿದೆ. ಈಗ ಕೇವಲ 70 ಅಡಿಯಷ್ಟೇ ನೀರು ಇದ್ದು ಒಂದು ವಾರ ಕಾಲ ನೀರನ್ನು ಸತತವಾಗಿ ಹರಿಸುತ್ತಿದ್ದರೆ ಅದು ಕೂಡ ಖಾಲಿಯಾಗಿ, ನಾಲೆಗಳಿಗೆ ನೀರು ಕೊಡುವುದನ್ನೇ ಸಂಪೂರ್ಣವಾಗಿ ಬಂದ್ ಮಾಡುತ್ತೀರಿ. ಇದು ಸರಿಯಾದ ಕ್ರಮವಲ್ಲ. ನೀರನ್ನ ಶೇಖರಣೆ ಮಾಡಿಕೊಂಡು ಅವಳಿ ತಾಲೂಕಿನ ರೈತರ ಹಿತ ಕಾಪಾಡಬೇಕು. ಭತ್ತ ಬೆಳೆಯಲು ಕಬಿನಿ ಎಡದಂಡೆ ನಾಲೆಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯ ಮಾಡಿದರು.
ಇಟ್ನಾ ಗ್ರಾಮದ ರೈತ ಜಯರಾಮ್ ಮಾತನಾಡಿ, ಕಬಿನಿ ಎಡದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರು, ಕಳೆದ ಮೂರು ದಿನಗಳಿಂದಲೂ ನೀರಾವರಿ ಇಲಾಖೆಗೆ ಆಗಮಿಸಿ ಭತ್ತ ಬೆಳೆಯಲು ನೀರು ಹರಿಸುವಂತೆ ಮನವಿ ಮಾಡಿದರು. ಆದರೆ ಇಲಾಖಾಧಿಕಾರಿಗಳು, ಸರ್ಕಾರ ಆದೇಶದಂತೆ ನಾವು ತಮಿಳುನಾಡಿಗೆ ನೀರು ಬಿಡುತ್ತಿದ್ದೇವೆ. ಎಲ್ಲಿಯವರೆಗೆ ನೀರು ಹರಿದುಹೋಗುತ್ತೋ ಗೊತ್ತಿಲ್ಲ. ಹೀಗಾಗಿ ರೈತರು ಭತ್ತ ಬೆಳೆಯಬಾರದು ಎಂದು ನೋಟಿಸ್ ನೀಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಏಕಾಏಕಿ ನಾಲೆಗೆ ನೀರು ಹರಿಸಿದರೆ, ತಗ್ಗುಪ್ರದೇದ ಜಮೀನುಗಳು ಜಲಾವೃತ್ತವಾಗಿ, ಕಷ್ಟಪಟ್ಟು ಬೆಳೆದಿದ್ದ, ಜೋಳ, ರಾಗಿ, ಹತ್ತಿ ನಾಶವಾಗುತ್ತವೆ. ಹಾಗಂತ ಸಂಪೂರ್ಣವಾಗಿ ನೀರು ಬಂದ್ ಮಾಡಿದರೆ, ದನಕರುಗಳಿಗೆ ನೀರು ಇಲ್ಲದಂತಾಗುತ್ತೆ. ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಕಡಿಮೆ ಮಾಡಿ, ಭತ್ತ ಬೆಳೆಯಲು ಎಡದಂಡೆ ನಾಲೆಗೆ ನೀರು ಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದರು.
ಮಾಗುಡಿಲು ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಸಪ್ಪ ಮಾತನಾಡಿ, ಈ ಬಾರಿ ಮಳೆ ಕೊರತೆ ಎದುರಾಗಿ ಬರಗಾಲವನ್ನು ಎದುರಿಸುತಿದ್ದೇವೆ ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ಶೇಕಡಾ 70ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿದ್ದು, ಕೃಷಿಯೇ ಆಧಾರವಾಗಿದೆ. ಕನಿಷ್ಠ ಒಂದು ಬೆಳೆ ಬೆಳೆಯಲು ಎಡದಂಡೆ ನಾಲೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಕಬಿನಿ ಎಇಇ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕರೆಸಬೇಕೆಂದು ಬಿಗಿಪಟ್ಟು ಹಿಡಿದರು. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಬಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಷಾ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ವೇಳೆ ರೈತರಾದ ಬಸಪ್ಪ, ನಾಗರಾಜು, ಪ್ರಕಾಶ್ ರಾಜ್ ಅರಸ್, ಬಸವರಾಜು, ನಾಗೇಂದ್ರ, ಚಿಕ್ಕಬಸಪ್ಪ, ನಂಜುಂಡಸ್ವಾಮಿ, ಚಂದ್ರಪ್ಪ, ರಮೇಶ್, ಕುಮಾರ, ಉಮೇಶ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಂಗಳವಾರದಿಂದ ಉಗ್ರ ಪ್ರತಿಭಟನೆ ನಿರ್ಧಾರ
ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕಿನ ರೈತರ ಹಿತ ಮೊದಲು ಕಾಪಾಡಬೇಕು. ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಶನಿವಾರದಿಂದ ಕಡಿಮೆ ಮಾಡಿ, ಕಬಿನಿ ಎಡದಂಡೆ ನಾಲೆಗೆ ಭತ್ತ ಬೆಳೆಯಲು ಹರಿಸಬೇಕು. ಇಲ್ಲವಾದಲ್ಲಿ ಮಂಗಳವಾರದಿಂದ ಉಗ್ರ ಪ್ರತಿಭಟನೆ ನಡೆಸಲು ಒಮ್ಮತದ ನಿರ್ಧಾರ ತೆಗೆದುಕೊಂಡು ಪ್ರತಿಭಟನೆ ಕೈಬಿಡಲಾಯಿತು.

