ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಂದಿನ ಜಾತ್ರೆಯೊಳಗೆ ಕರಾಡದೊಡ್ಡಿಯಲ್ಲಿ ಶ್ರೀ ಬಾಳುಮಾಮಾ ಅವರ ಭವ್ಯ ಗುಡಿ ನಿರ್ಮಾಣವಾಗಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಕರಾಡದೊಡ್ಡಿಯಲ್ಲಿ ನಡೆಯುತ್ತಿರುವ ಶ್ರೀ ಬಾಳು ಮಾಮಾ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಸಂತ ಬಾಳು ಮಾಮಾ ಅವರ ಆಶೀರ್ವಾದ ಪಡೆದು ಅವರು ಮಾತನಾಡಿದರು.
ಸಂತ ಬಾಳು ಮಾಮಾ ಅವರು ಶ್ರೇಷ್ಠ ಸಂತರಾಗಿದ್ದು, ಅವರ ಸರಳ ಬದುಕು, ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳು ನಮಗೆಲ್ಲ ಮಾದರಿಯಾಗಿವೆ. ಮುಂದಿನ ಸಲ ತಾವು ಇಲ್ಲಿಗೆ ಬರುವಷ್ಟರಲ್ಲಿ ಸಂತ ಬಾಳು ಮಾಮಾ ಅವರ ಭವ್ಯ ಗುಡಿ ನಿರ್ಮಾಣವಾಗಿರುತ್ತದೆ ಎಂದು ಅವರು ಭರವಸೆ ನೀಡಿದೆ.
ತಾಂಡಾದಲ್ಲಿ ಸಿಎಸ್‌ಆರ್ ಅನುದಾನದಡಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸುವುದರ ಜೊತೆಗೆ, ಮಕ್ಕಳಿಗೆ ಆಟಿಕೆ ಹಾಗೂ ಅಗತ್ಯ ಆಟದ ಸಲಕರಣೆಗಳನ್ನು ಒದಗಿಸಲಾಗುವುದು. ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಸರಕಾರಿ ನೋಟಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಇಲ್ಲಿನ ತಾಂಡಾ ನಿವಾಸಿಗಳಿಗೆ ಭೂಮಿ ಹಸ್ತಾಂತರಿಸಲಾಗುವುದು. ಮಾನವರ ದೊಡ್ಡಿಯಲ್ಲಿ ಹೊಸ ಶಾಲೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಬಾಳು ಮಾಮಾ ಅವರಿಗೆ ಕುರಿಗಳೆಂದರೆ ಪ್ರೀತಿ. ಕುರಿ ಸಾಕಾಣೆಗಾರರು ಕುರಿ ಸಾಕಾಣಿಕೆ ಜೊತೆಗೆ ಶಿಕ್ಷಣವನ್ನೂ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮುಖಂಡರಾದ ಸುರೇಶ ಭಂಡಾರಿ, ಶಿವಾನಂದ ದಳವಾಯಿ, ಸಚಿನ ಲೋಖಂಡೆ, ರಂಗಾ ಬರಕಾರಿ, ಶ್ರೀಶೈಲ ದಳವಾಯಿ, ಸಾಯಪ್ಪ ಮಾನವರ, ದಯಾಜಿ ಮಾನೆ, ನಿಂಗು ಬೆಳ್ಳುಬ್ಬಿ, ಅಣ್ಣಪ್ಪ, ಪುಂಡಲೀಕ ಮಾನವರ, ರಂಗಾ ಬರಕಡೆ, ಗಣಪತಿ ಮಾನವರ, ಸೋಪಣ್ಣ, ಶಾಮು ಪಾಂಡೆ, ತಾಯಪ್ಪ, ಭೀಮಶಿ, ಗೋಪಾಲ, ಬಾಜಿರಾವ್, ಮುತ್ತಪ್ಪ ಡೊಂಬಾಳೆ, ಅಶೋಕಣ್ಣ ದಳವಾಯಿ, ಪೀರ್ ಪಟೇಲ ಪಾಟೀಲ, ಶಾಮು ಪಾಂಡೆ ಮುಂತಾದವರು ಉಪಸ್ಥಿತರಿದ್ದರು.

