ವಿಜಯಪುರ ಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಿಸಿ; ರೈತರ ಖಾತೆಗೆ ನೇರ ಪರಿಹಾರ ಜಮೆ ಮಾಡಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀಮಂತರಿಂದ ಸಾಲ ಪಡೆದು ಬಿತ್ತನೆ ಬೀಜ ಖರೀದಿಸಿ, ಹೊಲದಲ್ಲಿ ಬೆವರು ಸುರಿಸಿ ಬೆಳೆ ಬೆಳೆಸಿ, ಬಂದ ಫಸಲಿನಿಂದ ಸಾಲ ತೀರಿಸಿ, ಕುಟುಂಬದ ಜೀವನ ಸುಗಮವಾಗಿರಲಿ ಎಂಬ ಕನಸು ಕಂಡಿದ್ದ ರೈತನ ಆಶಯ ಇಂದು ಮಣ್ಣುಪಾಲಾಗಿದೆ ಎಂದು ಇಂಡಿ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿಕಾಂತ ಕೋನಳ್ಳಿ (ಕುಡಗಿ) ಆಕ್ರೋಶ ವ್ಯಕ್ತಪಡಿಸಿದರು.
ಝಳಕಿ, ಬಳ್ಳೊಳ್ಳಿ, ಗುಂದಾವನ ಹಾಗೂ ಕುಡಗಿ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಅವರು, ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ರೈತರೊಂದಿಗೆ ಚರ್ಚೆ ನಡೆಸಿದರು.
ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದು, ಬಿತ್ತನೆಗೆ ಮಾಡಿದ ಖರ್ಚು ಕೂಡ ಮರಳುವ ಪರಿಸ್ಥಿತಿ ಇಲ್ಲದಿರುವುದು ಹಾಗೂ ಸಾಲದ ಹೊರೆ ಹೆಚ್ಚುತ್ತಿರುವ ಕುರಿತು ರೈತರಿಂದ ಮಾಹಿತಿ ಪಡೆದು ಅವರ ಅಳಲನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕಾಂತ ಕೋನಳ್ಳಿ, “ರೈತನ ಬೆಳೆ ಮಣ್ಣುಪಾಲಾಗಿದೆ, ಮಳೆ ನೀರು ದೇವರ ಪಾಲಾಗಿದೆ, ಅನುದಾನ ಸರ್ಕಾರದ ಪಾಲಾಗಿದೆ; ಕಣ್ಣೀರು ಮಾತ್ರ ರೈತನ ಪಾಲಾಗಿದೆ” ಎಂದು ವ್ಯಥೆ ವ್ಯಕ್ತಪಡಿಸಿದರು.
ಮಳೆ ಕೈಕೊಟ್ಟಿರುವ ಪರಿಣಾಮ ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಕೇವಲ ಜಿಪಿಎಸ್ ಮೂಲಕ ಬೆಳೆ ಪರಿಶೀಲನೆ ಹಾಗೂ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸುವುದಕ್ಕೆ ಸೀಮಿತವಾಗದೆ, ವಾಸ್ತವ ಪರಿಸ್ಥಿತಿಯನ್ನು ಅರಿತು ಕೂಡಲೇ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರ ತಕ್ಷಣವೇ ಬರ ಪರಿಸ್ಥಿತಿಯ ಕುರಿತು ಸಮಗ್ರ ಸಮೀಕ್ಷೆ ನಡೆಸಿ, ಬೆಳೆ ನಷ್ಟಕ್ಕೆ ಅನುಗುಣವಾಗಿ ರೈತರಿಗೆ ಪರಿಹಾರ ಒದಗಿಸಬೇಕು. ರೈತರ ಸಾಲದ ಹೊರೆ, ಬಿತ್ತನೆ ವೆಚ್ಚ ಹಾಗೂ ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೆರವಿನ ಬಗ್ಗೆಯೂ ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.

