ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ನಾಲ್ಕು ದಶಕಗಳಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯ ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಂಗಭೂಮಿ ಕಲಾವಿದ ರಾಜಕುಮಾರ್ ಅವರು
ಪ್ರಸಕ್ತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
1987ರಲ್ಲಿ ಶಾಲಾ ದಿನಗಳಲ್ಲಿಯೇ ನಾಟಕದ ಮೂಲಕ ರಂಗಭೂಮಿಗೆ ಪ್ರವೇಶಿಸಿದ ರಾಜಕುಮಾರ್ ಅವರು ನಂತರ ಕಾಲೇಜು ದಿನಗಳಲ್ಲಿ ಕಿರು ನಾಟಕಗಳಲ್ಲಿ ಅಭಿನಯ ಹಾಗೂ ನಿರ್ದೇಶನದ ಮೂಲಕ ತಮ್ಮ ಕಲಾ ಪಯಣವನ್ನು ಮುಂದುವರಿಸಿದರು.
1991ರಲ್ಲಿ ಭಾರತ ಯಾತ್ರಾ ಕೇಂದ್ರದ ಕಾಲೇಜು ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, ಪ್ರಯೋಗ ರಂಗತಂಡದಲ್ಲಿ ಶ್ರೀನಿವಾಸ್ ಪ್ರಭು ಅವರ ನಿರ್ದೇಶನದ ‘ರಾಜಭೇಟೆ’ ನಾಟಕದಲ್ಲಿ ಅಭಿನಯಿಸಿದ್ದು,
1992 ರಿಂದ 2014ರವರೆಗೆ ಭಾರತ ಯಾತ್ರಾ ಕೇಂದ್ರ ಆಯೋಜಿಸಿದ ಅಂತರ ಕಾಲೇಜು ರಂಗ ಸ್ಪರ್ಧೆಗಳಲ್ಲಿ ನೇಪಥ್ಯ ನಿರ್ವಹಣೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಮೈಸೂರು ಲಲಿತ ಕಲಾ ಸಂಘ ಆಯೋಜಿಸಿದ ನಾಟಕ ಸ್ಪರ್ಧೆಯಲ್ಲಿ ‘ರಾಕ್ಷಸ’ ನಾಟಕದ ನಿರ್ದೇಶನ ಸಹ ಮಾಡಿದ್ದಾರೆ. ಉಡುಪಿಯ ‘ನಮ್ಮ ತುಳುವ’ ಕಲಾಸಂಘ ತಂಡದೊಂದಿಗೆ ‘ಶ್ರೀರಂಗ ರಚನೆಯ ನೀ ಮಾಯೆಯೋ, ಒಳಗೋ,, ನೀನೊಳಗೋ ಮಾಯೆಯೋ’ ನಾಟಕದ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ.
ರಾಜಕುಮಾರ್ ಅವರ ನಾಲ್ಕು ದಶಕಗಳ ರಂಗಸೇವೆಯಲ್ಲಿ ರಾಜ್ಯ ಹಾಗೂ ದೇಶದ ಪ್ರಮುಖ ನಗರಗಳಲ್ಲಿ 2,000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯ, ನಿರ್ದೇಶನ, ನೇಪಥ್ಯ, ಬೆಳಕು ಹಾಗೂ ಪ್ರಸಾಧನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಇವರದ್ದಾಗಿದೆ. ರಾಷ್ಟ್ರೀಯ ನಾಟಕೋತ್ಸವಗಳು ಹಾಗೂ ದಕ್ಷಿಣ ವಲಯ ನಾಟಕೋತ್ಸವಗಳಲ್ಲಿಯೂ ಅವರು ಭಾಗವಹಿಸಿದ್ದಾರೆ.
ತಂಜಾವೂರಿನಲ್ಲಿ ನಡೆದ ಕಾವೇರಿ ಕಲೈವಿಳಾ ಕಾರ್ಯಕ್ರಮದಲ್ಲಿ ತಮಿಳು ನಾಟಕ ‘ಅರಕ್ಕನ್’ನಲ್ಲಿ ಅಭಿನಯಿಸಿ, ಪ್ರಸಾಧನಕ್ಕಾಗಿ ಅತ್ಯುತ್ತಮ ನಟ ಹಾಗೂ ನಿರ್ದೇಶನ ಪ್ರಶಸ್ತಿಯನ್ನು ಪಡೆದಿರುವುದೂ ಅವರ ಕಲಾ ಸೇವೆಯ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.
ಇದಲ್ಲದೆ ಹಂಪಿ ಉತ್ಸವ, ಬನವಾಸಿ ಉತ್ಸವ, ಆನೆಗುಂದಿ ಉತ್ಸವ, ರನ್ನ ಉತ್ಸವ ಹಾಗೂ ಮೈಸೂರು ದಸರಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಉತ್ಸವಗಳಲ್ಲಿ ಅವರು ವೇದಿಕೆ ನಿರ್ವಹಣೆ, ನಿರೂಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿಯೂ ನಿರ್ವಹಣಾ ಕಾರ್ಯದಲ್ಲಿ ಭಾಗವಹಿಸಿದ್ದಾರೆ.
ವಿವಿಧ ಪ್ರಸಿದ್ಧ ನಾಟಕ ನಿರ್ದೇಶಕರೊಂದಿಗೆ ಸಹಕರಿಸಿ ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ರಾಜಕುಮಾರ್ ಅವರು ‘ಕರ್ಣಭಾರ’, ‘ಪರಿಹಾರ’, ‘ವಧೂಟಿ’, ‘ಸ್ಮಶಾನ ಕುರುಕ್ಷೇತ್ರ’, ‘ಸುಭದ್ರಾ ಕಲ್ಯಾಣ’, ‘ಅನಭಿಜ್ಞ ಶಾಕುಂತಲ’, ‘ಅರಕ್ಕನ್’ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯ ಹಾಗೂ ನಿರ್ದೇಶನದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ರಂಗಭೂಮಿಗೆ ಸಲ್ಲಿಸಿರುವ ದೀರ್ಘಕಾಲದ ಸೇವೆ, ಅಭಿನಯ, ನಿರ್ದೇಶನ, ನೇಪಥ್ಯ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಜಕುಮಾರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿರುವುದು ಇವರ ಕಾರ್ಯಕ್ಷಮತೆಗೆ ಕೈಗನ್ನಡಿಯಾಗಿದೆ.
ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪೆರೆಡ್ ನಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸುವ ಸ್ತಬ್ದ ಚಿತ್ರದ ನಿರ್ಮಾಣದಲ್ಲಿ
ಪ್ರತಿರೂಪಿ ಸಂಸ್ಥೆಯ ಅಂತಾರಾಷ್ಟ್ರೀಯ ಕಲಾ ನಿರ್ದೇಶಕರಾದ ಶಶಿಧರ ಅಡಪ ಅವರ ತಂಡದಿಂದ ಕಳೆದ 12 ಸ್ತಬ್ಧಚಿತ್ರಗಳ ನಿರ್ಮಾಣದಲ್ಲಿ ಡಿಸೆಂಬರ್ ಹಾಗೂ ಜನವರಿ ಮಾಹೆಯ ನವದೆಹಲಿಯ ಕೊರೆಯುವ ಚಳಿಯಲ್ಲೂ ಕಾರ್ಯನಿರ್ವಹಿಸಿದ ಅಗಾಧ ಅನುಭವ ಹೊಂದಿದ್ದಾರೆ.

