ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸುರವರ ದೂರದೃಷ್ಟಿತ್ವ, ಬದ್ಧತೆ ರಾಜ್ಯದ ಅಭಿವೃದ್ಧಿಗೆ ದಾರಿದೀಪವಾಗಿದ್ದು, ಅವರ ಕೊಡುಗೆಗಳು ಸದಾ ಪ್ರೇರಣಾದಯಕವಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಿ.ದೇವರಾಜ ಅರಸು ಅವರ 111ನೇ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ, ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆ ತಂದ ಅರಸು ಅವರು ದುರ್ಬಲ ವರ್ಗದವರಲ್ಲಿ ಸ್ವಾಭಿಮಾನದ ಕಲ್ಪನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಯುಗಪುರುಷರಾಗಿದ್ದಾರೆ ಎಂದು ಹೇಳಿದರು.
ಸರಳ, ನೇರ, ನಿರ್ಭೀತ ಆಡಳಿತಕ್ಕೆ ಹೆಸರಾದ ಅರಸು ಅವರು ಜನಸಾಮಾನ್ಯರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಹಿಂದುಳಿದ ವರ್ಗ, ದಲಿತರ, ಬಡವರ ಮನಸ್ಸಿನಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಮಾತನಾಡಿ, ಬಡವರ ಬದುಕಿನಲ್ಲಿ ಹೊಸ ಭರವಸೆ ತಂದ ಅರಸು ಅವರು ಕರ್ನಾಟಕದಲ್ಲಿ ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಧೀಮಂತ ನಾಯಕ ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.

