ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ-ಜಿಪಂ ಸಿಇಓ ರಾಹುಲ್ ಶಿಂಧೆ ಅಭಿಮತ
ವಿಜಯಪುರ: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರದ ಪಿಡಿಜೆ ಹೈಸ್ಕೂಲ್ ನಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಯಿತು.
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿಯಲ್ಲಿ ದಾಖಲಾದ ಎಲ್ಲ ಮಕ್ಕಳಿಗೆ ಮಧ್ಯಾಹ್ನ ಉಪಹಾರದೊಂದಿಗೆ ಪೂರಕ ಪೌಷ್ಟಿಕ ಆಹಾರಗಳಾದ ಮೊಟ್ಟೆ, ಬಾಳೆ ಹಣ್ಣು ಮತ್ತು ಶೇಂಗಾ ಚಿಕ್ಕಿ ನಿಯಮಾನುಸಾರ ಮಕ್ಕಳಿಗೆ ವಿತರಿಸಿ, ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಲಾ ಮುಖ್ಯ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇಲಾಖೆಯಿಂದ ಪೊರೈಕೆಯಾಗುವ ಆಹಾರ ಧಾನ್ಯ ಅವಶ್ಯಕತೆಗೆ ಅನುಸಾರವಾಗಿ ಬಳಕೆ ಮಾಡಿಕೊಳ್ಳವುದು. ಅಡುಗೆ ಕೊಠಡಿ ಸ್ವಚ್ಛತೆ, ಮಕ್ಕಳ ಸುರಕ್ಷತೆ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಅಡುಗೆ ಸಮವಸ್ತ್ರ, ಶಿರವಸ್ತ್ರ (ಏಫ್ರಾನ್ ಮತ್ತು ಕ್ಯಾಪ್) ಬಳಸುವಂತೆ ನೋಡಿಕೊಳ್ಳಬೇಕು ಎಂದರು. ಶಾಲೆಯಲ್ಲಿ ಆಹಾರ ಧಾನ್ಯಗಳ ಕೊರತೆಯಾದಲ್ಲಿ ಸಮೀಪದ ಶಾಲೆಗಳಿಂದ, ರೇಷನ್ ವಿತರಕರಿಂದ, ಅಂಗನವಾಡಿಗಳಿಂದ ಅಥವಾ ಹತ್ತಿರದ ವಸತಿ ನಿಲಯಗಳಿಂದ ಪಡೆದು ಮಕ್ಕಳಿಗೆ ಆಹಾರ ಪೊರೈಕೆ ಮಾಡಬೇಕು. ಸಮಸ್ಯೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಎಸ್.ಎಸ್.ಮುಜಾವರ ಅವರು, ಇಲಾಖೆಯ ಆದೇಶದಂತೆ ಬಿಸಿಯೂಟ ಕೇಂದ್ರ ಹೊಂದಿರುವ ಶಾಲೆಗಳ ಮುಖ್ಯ ಶಿಕ್ಷಕರು ಬಿಸಿಯೂಟ ಜಂಟಿ ಖಾತೆಯನ್ನು ತಿದ್ದುಪಡಿ ಮಾಡಿ ಅನುದಾನ ಬಳಸಿಕೊಳ್ಳಬೇಕು ಮತ್ತು ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ನಿರಂತರವಾಗಿ ಮಾಹಿತಿ ನಮೂದಿಸಲು ತಿಳಿಸಿದರು.
ಸಭೆಯಲ್ಲಿ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.