ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಬದುಕು ಯಾವಾಗಲೂ ನಾವು ಅಂದುಕೊಂಡಂತೆಯೇ ಸಾಗುವುದಿಲ್ಲ. ಅನ್ನೋದು ಹಲವಾರು ತಿರುವುಗಳನ್ನು ಕಂಡವರಿಗೆಲ್ಲ ಅರಿವಿಗೆ ಬಂದಿರುತ್ತದೆ. ಬದುಕಿನಲ್ಲಿ ನಾವು ನಿರೀಕ್ಷಿಸಿದಂತೆ ನಡೆಯುವುದು ತುಂಬಾ ಕಡಿಮೆ. ‘ಬದುಕು ಅನಿರೀಕ್ಷಿತಗಳ ಮೊತ್ತ.’ ಎಂಬ ಮಾತು ಅಕ್ಷರಶಃ ಸತ್ಯ. ಜೀವನವು ಅನಿರೀಕ್ಷಿತ. ಅದು ಹಠಾತ್ತನೇ ಮತ್ತು ಅನೌಪಚಾರಿಕವಾಗಿ ಕೊನೆಗೊಳ್ಳಬಹುದು ಎಂಬುದು ಈಗಾಗಲೇ ವಿಪುಲ ಉದಾಹರಣೆಗಳಿಂದ ಸಾಬೀತಾಗಿದೆ. ಅಂದರೆ ಇಲ್ಲಿ ನಾನು ಹೇಳ ಹೊರಟಿರುವುದು ಅನಿರೀಕ್ಷಿತ ಘಟನೆಗಳು ನಡೆದಾಗ ದುಃಖ ನಿರಾಶೆ ಭಯ ಉಂಟಾಗುವುದು ಸಹಜ. ಆದರೆ ಅವೇ ಭಾವನೆಗಳಲ್ಲಿ ಮುಳುಗಿಹೋಗುವಷ್ಟು ಸಮಯವಿಲ್ಲ. ಅಂದರೆ ಇದರರ್ಥ ಜೀವನವು ವೇಗವಾಗಿ ಚಲಿಸುತ್ತದೆ ಮತ್ತು ಅವಕಾಶಗಳು ಶಾಶ್ವತವಾಗಿ ಉಳಿಯುವುದಿಲ್ಲ ಎಂಬುದನ್ನು ಅರಿವಿನಲ್ಲಿ ಇಟ್ಟುಕೊಳ್ಳಬೇಕು. ‘ನಿಮ್ಮ ಜೀವನದಲ್ಲಿ ನಿಮ್ಮ ಛಾಪು ಮೂಡಿಸಲು ನಿಮಗೆ ಕೇವಲ ಅಲ್ಪಾವಧಿ ಮಾತ್ರ ಇದೆ.’ ಈ ಹೇಳಿಕೆಯಲ್ಲಿ ಹಾಲಿವುಡ್ ಜಾರ್ಜ್ ಕ್ಲೋನಿ ಗಮನಾರ್ಹ ಪರಿಣಾಮ ಬೀರಲು ಇರುವ ಸೀಮಿತ ಸಮಯವನ್ನು ಒತ್ತಿ ಹೇಳಿದ್ದಾರೆ.

ಒಂದು ಕಲೆ
‘ಸಮುದ್ರ ಶಾಂತವಿದ್ದಾಗ ಯಾರೂ ದೋಣಿ ನಡೆಸುವುದನ್ನು ಕಲಿಯಲಾರರು. ಅಲೆಗಳು ಅಬ್ಬರಿಸದಾಗಲೇ ಒಬ್ಬ ನುರಿತ ನಾವಿಕ ಸಿದ್ಧನಾಗುತ್ತಾನೆ.’ ಅನಿರೀಕ್ಷಿತ ಘಟನೆ ನಿಮ್ಮನ್ನು ಒಬ್ಬ ಯಶಸ್ವಿ ವ್ಯಕ್ತಿಯನ್ನಾಗಿ ರೂಪಿಸಬಲ್ಲದು. ಯಾವುದೇ ಮುನ್ಸೂಚನೆ ನೀಡದೇ ಇದ್ದಕ್ಕಿದ್ದಂತೆ ಎದುರಾಗುವ ಸಮಸ್ಯೆಗಳು ತಲೆಯನ್ನು ತಿರುಗಿಸುತ್ತವೆ. ಕೆಲಸದಲ್ಲಿನ ಬದಲಾವಣೆಗಳು, ವೈಯಕ್ತಿಕ ಜೀವನದ ಅನಿರೀಕ್ಷಿತ ಸಂಕಷ್ಟಗಳು ಆತಂಕಕ್ಕೆ ತಳ್ಳುತ್ತವೆ. ಆದರೆ ಅಂತಹ ಸಮಯವನ್ನು ಧೈರ್ಯದಿಂದ ಎದುರಿಸುವುದು ಹೇಗೆ ಎಂಬುದು ನೂರು ಬಿಲಿಯನ್ ಪ್ರಶ್ನೆ ತರಹ ಕಾಣಿಸುತ್ತದೆ. ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿಸುವುದು ಒಂದು ಕಲೆ ನಾವು ಎಷ್ಟೇ ಅಚ್ಚುಕಟ್ಟಾಗಿ ಯೋಜನೆ ರೂಪಿಸಿದರೂ, ಯಾವುದೋ ಒಂದು ಕ್ಷಣದಲ್ಲಿ ಅನಿರೀಕ್ಷಿತ ಘಟನೆಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಬಹುದು. ಅಂತ ಸಂದರ್ಭಗಳಲ್ಲಿ ಎದುರಾದ ಸ್ಥಿತಿಯನ್ನು ಎದೆಗುಂದದೆ ಎದುರಿಸುವುದು ಹೇಗೆ? ಎನ್ನುವ ಪ್ರಶ್ನೆಗೆ ಇಲ್ಲವೆ ಕೆಲವು ಉಪಯುಕ್ತ ಸಲಹೆಗಳು.
ಯೋಚನೆಗೆ ಆದ್ಯತೆ
ಸಮಾಧಾನಚಿತ್ತವನ್ನು ಹೊಂದಿದ್ದರೆ ಎಂಥ ಕಠಿಣ ಪರಿಸ್ಥಿತಿಯನ್ನು ನಾವು ಚೆನ್ನಾಗಿ ನಿಭಾಯಿಸಬಲ್ಲೆವು. ಯಾವುದೇ ಅನಿರೀಕ್ಷಿತ ಘಟನೆ ಸಂಭವಿಸಿದಾಗ ನೀವೊಬ್ಬರೇ ಎಲ್ಲವನ್ನೂ ನಿಭಾಯಿಸಬೇಕೆಂದಿಲ್ಲ. ಸ್ನೇಹಿತರ ಮಾರ್ಗದರ್ಶಕರ ಸಲಹೆ ಪಡೆಯಬಹುದು. ಅದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮನಸ್ಸಿನ ಭಾರವನ್ನು ಹಗುರವಾಗಿಸುತ್ತದೆ. ಇದೆಲ್ಲ ಬಿಟ್ಟು ಗಾಬರಿಯಲ್ಲಿ ನಿರ್ಧರಿಸಬಾರದು. ಗಾಬರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಕ್ಕೆ ಮತ್ತಷ್ಟು ಆಳವಾದ ಕಂದಕ್ಕೆ ತಳ್ಳುತ್ತವೆ. ಏಕೆಂದರೆ ಬಹಳಷ್ಟು ಸಲ ಅವು ತಪ್ಪಾಗಿರುತ್ತವೆ. ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ ಗಾಬರಿಗೊಳ್ಳದೇ ಧೀರ್ಘ ಉಸಿರು ತೆಗೆದುಕೊಳ್ಳಿ. ಪರಿಸ್ಥಿತಿಯನ್ನು ವಿಶ್ಲೇಷಿಸಲು ಸ್ವಲ್ಪ ಸಮಯ ನೀಡಿ. ಈಗಾಗಲೇ ಆಗಿ ಹೋಗಿದೆ ಹೀಗಾಗಿ ಆಗಿ ಹೋಗಿದ್ದನ್ನು ನಿಯಂತ್ರಿಸಲು ನನ್ನಿಂದ ಸಾಧ್ಯವಿಲ್ಲ. ಆದರೆ ಮುಂದೇನು ಮಾಡಬೇಕೆಂಬುದನ್ನು ನಾನು ನಿಯಂತ್ರಿಸಬಲ್ಲೆ ನಿರ್ಧರಿಸಲ್ಲೆ ಎಂಬ ವಿಶ್ವಾಸದಿಂದ ಸಮಾಧಾನವಾಗಿ ಮುಂದೇನು ಮಾಡಬಹುದು ಎಂಬ ಯೋಚನೆಗೆ ಆದ್ಯತೆ ನೀಡಿ.

ಒಪ್ಪಿಕೊಳ್ಳಿ
ಅಂದುಕೊಂಡಂತೆ ಆಗದಿದ್ದಾಗ ಕೋಪ ನೆತ್ತಿಗೇರುತ್ತದೆ. ಆಘಾತವಾಗುತ್ತದೆ ಸ್ವ ನಿಯಂತ್ರಣವೂ ತಪ್ಪುತ್ತದೆ. ಇದೆಲ್ಲ ಬೇಡವೆಂದು ದೂರ ಓಡಲು ಪ್ರಯತ್ನಿಸುತ್ತೇವೆ. ಇರುವ ಆರಾಮ ವಲಯದಲ್ಲಿ ಆರಾಮಾಗಿ ಇದ್ದಬಿಡಬೇಕೆಂದು ಬಯಸುತ್ತೇವೆ. ‘ಉಳಿದವರೆಲ್ಲ ಆರಾಮಾಗಿದ್ದಾರೆ ನನಗೆ ಯಾಕೆ ಹೀಗೆ ಆಯ್ತು?’ ಎಂದು ಪ್ರಶ್ನಿಸುತ್ತ ‘ಇದು ಹೀಗಾಗಬಾರದಿತ್ತು.’ ಎಂದು ಹಳಹಳಿಸುತ್ತ ಚಿಂತೆಯ ಲೋಕದಲ್ಲಿ ಕುಳಿತುಬಿಡುತ್ತೇವೆ. ಇದೆಲ್ಲದರ ಬದಲು ಆ ಸಮಯದಲ್ಲಿ ಬಂದದ್ದನ್ನು ಬಂದಂತೆ ಸ್ವೀಕರಿಸಬೇಕು ಎಂಬುದನ್ನು ಮರೆಯಬಾರದು. ನಾವು ಇಲ್ಲಿ ಒಂದು ವಿಷಯವನ್ನು ಚೆನ್ನಾಗಿ ನೆನಪಿಡಬೇಕು ಅದೆಂದರೆ; ‘ಪ್ರತಿರೋಧಕ್ಕಿಂದ ಸ್ವೀಕಾರವು ನಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.’ ನಡೆದ ಘಟನೆಯನ್ನು ನಮ್ಮಿಂದ ಬದಲಿಸಲು ಸಾಧ್ಯವಿಲ್ಲ. ಆದರೆ ಅದಕ್ಕೆ ನಾವು ನೀಡುವ ಪ್ರತಿಕ್ರಿಯೆಯು ಮುಂದಾಗುವ ಅನಾಹುತವನ್ನು ಕಡಿಮೆಯಾಗಿಸಬಹುದು. ಇಲ್ಲವೇ ಮುಂದೆ ನಡೆಯುವ ಹೆಚ್ಚಿನ ಆವಾಂತರಗಳನ್ನು ಖಂಡಿತ ನಿಲ್ಲಿಸಬಹುದು. ಆ ಮುಖಾಂತರ ಬದುಕನ್ನು ಮತ್ತು ಸರಿಯಾದ ಹಳಿಗೆ ಹಚ್ಚಬಲ್ಲದು. ಆದ್ದರಿಂದ ಬದುಕನ್ನು ಬದಲಾಯಿಸುವ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಎಷ್ಟು ಬೇಗ ಒಪ್ಪಿಕೊಳ್ಳುತ್ತೇವೆಯೋ ಅಷ್ಟು ಬೇಗ ಪರಿಹಾರ ಕಂಡುಕೊಳ್ಳಬಹುದು.
ಸಣ್ಣ ಸಣ್ಣ ಹೆಜ್ಜೆಗಳನ್ನಿಡಿ
ಮೈಮರೆತು ಕುಳಿತಾಗ ಹಿಂದಿನಿಂದ ಯಾರೋ ಬಂದು ತಳ್ಳಿದಂತೆ ಆಗುವ ದೊಡ್ಡ ಸಮಸ್ಯೆಗಳು ಖಿನ್ನತೆಗೆ ತಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಆ ಸಮಸ್ಯೆಗಳು ದೊಡ್ಡ ಬೆಟ್ಟದಂತೆ ಕಾಣುತ್ತವೆ ಎನ್ನುವ ಕಾರಣಕ್ಕೆ ಎದೆಗುಂದಬಾರದು. ಒಂದೇ ಸಲ ಪರಿಹರಿಸಲು ಪ್ರಯತ್ನಿಸಬಾರದು. ಬದಲಾಗಿ ಸಮಸ್ಯೆಯನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ವಿಂಗಡಿಸಬೇಕು. ಅದರಲ್ಲಿ ಅತಿ ಮುಖ್ಯವಾದುದನ್ನು ಗುರುತಿಸಿ ಅದನ್ನು ಪರಿಹರಿಸಲು ಮುಂದಾಗಬೇಕು. ದೊಡ್ಡ ಪರ್ವತವನ್ನು ಕೆಳಗೆ ನಿಂತು ನೋಡುವಾಗ ನಾವು ಕುಬ್ಜರಾಗಿ ಕಾಣುತ್ತೇವೆ. ಅದು ದೈತ್ಯನಂತೆ ಕಾಣುತ್ತದೆ. ಅದೇ ಪರ್ವತವನ್ನು ನಾವು ಸಣ್ಣ ಸಣ್ಣ ಹೆಜ್ಜೆಗಳನ್ನಿಡುತ್ತ ಹತ್ತಿದರೆ ಆ ಪರ್ವತ ನಮ್ಮ ಕಾಲ ಕೆಳಗಿರುತ್ತದೆ. ಅದರ ನೆತ್ತಿಯ ಮೇಲೆ ನಾವು ನಿಂತಿರುತ್ತೇವೆ. ಇದರರ್ಥ ಇಷ್ಟೆ ಅನಿರೀಕ್ಷಿತ ನಡೆದ ಘಟನೆಯತ್ತ ಸಣ್ಣ ಸಣ್ಣ ಹೆಜ್ಜೆಗಳನ್ನಿಡುತ್ತ ಪರಿಹಾರ ಕಂಡುಕೊಳ್ಳುವುದು ಜಾಣತನ.
ಸ್ವೀಕರಿಸಿ
ಜೀವನದಲ್ಲಿ ಆಘಾತದಂತೆ ತೋರುವ ಪ್ರತಿ ಅನಿರೀಕ್ಷಿತ ಘಟನೆಯೂ ನಮಗೆ ಸಹನೆ ಮತ್ತು ಸಾಮರ್ಥ್ಯದ ಪರೀಕ್ಷೆಯಂತಿರುತ್ತವೆ. ಅದು ಹೊಸ ಹೊಸ ಪಾಠವನ್ನು ಕಲಿಸುತ್ತವೆ. ‘ಗಾಳಿ ಬೀಸುವ ದಿಕ್ಕನ್ನು ನಾವು ಬದಲಿಸಲಾರೆವು, ಆದರೆ ನಮ್ಮ ದೋಣಿಯ ಪಟಗಳನ್ನು ಸರಿಹೊಂದಿಸಬಹುದು.’ ನೀವು ಎರಡು ಸಮಸ್ಯೆಗಳನ್ನು ಪರಿಹರಿಸಬೇಕಾಗಿ ಬಂದಾಗ ಮೊದಲು ದೊಡ್ಡ ಸಮಸ್ಯೆಯನ್ನು ಕೈಗೆತ್ತಿಕೊಳ್ಳಿ. ಇದರಿಂದಾಗಿ ಆ ಬಳಿಕ ಕೈಗೆತ್ತಿಕೊಳ್ಳುವ ಸಣ್ಣದು ಅತಿ ಸಣ್ಣದಾಗಿ ಕಾಣಿಸುತ್ತದೆ. ಅನಿರೀಕ್ಷಿತ ಸಂಗತಿಗಳು ನಮ್ಮನ್ನು ಪಾತಾಳಕ್ಕೆ ತಳ್ಳುವುದಿಲ್ಲ. ಅವುಗಳೆಡೆ ನೋಡುವ ದೃಷ್ಟಿಕೋನವನ್ನು ಬದಲಿಸಿಕೊಂಡು ಸ್ವೀಕರಿಸಿದರೆ ಅವು ನಮಗೆ ತಾಳ್ಮೆ ಮತ್ತು ಧೈರ್ಯವನ್ನು ಕಲಿಸುತ್ತವೆ. ಆದ್ದರಿಂದ ಆ ತಿರುವುಗಳನ್ನು ಮನಸ್ಸಿನಿಂದ ಸ್ವೀಕರಿಸಬೇಕು.
ಗಮನಹರಿಸಿ
ನಮ್ಮ ನಿಯಂತ್ರಣದಲ್ಲಿ ಇರದ ವಿಷಯಗಳನ್ನು ನಿಯಂತ್ರಿಸಲು ಮುಂದಾಗುವುದು ಮೂರ್ಖತನವೆನಿಸುತ್ತದೆ. ನಮ್ಮ ಕೈಯಲ್ಲಿಲ್ಲದ ವಿಷಯಗಳ ಬಗ್ಗೆ ಚಿಂತಿಸುವುದು ವ್ಯರ್ಥ. ಉದಾಹರಣೆಗೆ ಹೇಳಬೇಕೆಂದರೆ ಮಳೆ ಬರುವುದನ್ನು ನಿಲ್ಲಿಸುವುದು ನಮ್ಮ ಕೈಯಲ್ಲಿಲ್ಲ. ಆದರೆ ಆ ಮಳೆ ಹನಿಗಳು ನಮ್ಮ ಮೇಲೆ ಬೀಳದಂತೆ ತಡೆಯುವುದು ನಮ್ಮ ಕೈಯಲ್ಲಿದೆ. ಮಳೆ ಹನಿಗಳಿಗೆ ಕೊಡೆ ಹಿಡಿಯುವುದು ನಮಗೆ ಸಾಧ್ಯ. ಹೀಗಾಗಿ ನಮ್ಮ ನಿಯಂತ್ರಣದಲ್ಲಿರುವ ಸಣ್ಣ ಸಣ್ಣ ಸಂಗತಿಗಳ ಬಗೆಗೆ ಗಮನಹರಿಸಬೇಕು. ಮತ್ತು ಅವುಗಳಿಗಾಗಿ ಶಕ್ತಿಯನ್ನು ವ್ಯಯಿಸಬೇಕು.
ಕೊನೆ ಹನಿ
ಬಿರುಗಾಳಿಯು ಮರವನ್ನು ಬೀಳಿಸಬಹುದು ಆದರೆ ಬಾಗುವ ಗುಣವಿರುವ ಹುಲ್ಲು ಕಡ್ಡಿಯನ್ನಲ್ಲ ಬಿರುಗಾಳಿ ಅಡಗಿದ ಮೇಲೆ ಹುಲ್ಲು ಮತ್ತೆ ಎದ್ದು ನಿಲ್ಲುತ್ತದೆ. ಅನಿರೀಕ್ಷಿತ ಬಿರುಗಾಳಿಗೆ ಉತ್ತರಿಸುವ ಗುಣವೇ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೀವನವು ಸಮುದ್ರದ ಅಲೆಗಳಂತೆ; ಯಾವಾಗ ಯಾವ ಕಡೆಯಿಂದ ಅಲೆ ಅಪ್ಪಳಿಸುತ್ತದೆ ಎಂದು ಹೇಳುವುದು ಕಷ್ಟ. ‘ನನಗೆ ಏಕೆ ಹೀಗಾಯಿತು?’ ಎಂದು ಕೇಳುವ ಬದಲು ‘ಈ ಪರಿಸ್ಥಿತಿ ನನಗೇನು ಕಲಿಸುತ್ತಿದೆ?’ ಎಂದು ಯೋಚಿಸಿದಾಗ ಅನಿರೀಕ್ಷಿತ ತಿರುವುಗಳು ಹೊಸ ಅವಕಾಶಗಳಿಗೂ ದಾರಿಯಾಗಬಲ್ಲವು.


