ಬಸವನಬಾಗೇವಾಡಿ: ಮಳೆಗಾಲದಲ್ಲಿ ಮಳೆ ನೀರು ಹಳ್ಳಕೊಳ್ಳದ ಮುಖಾಂತರ ವ್ಯರ್ಥ ಹರಿದು ಹೋಗುವದನ್ನು ತಡೆಯಲು ಈ ಮೂಲಕ ರೈತ ಬಾಂಧವರಿಗೆ, ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಬಾಂದಾರಗಳನ್ನು ನಿರ್ಮಾಣ ಮಾಡುತ್ತದೆ. ನಿರ್ಮಾಣವಾದ ಬಾಂದಾರ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮದ ಹಳ್ಳಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ೨೦೨೨-೨೩ ನೇ ಸಾಲಿನ ನಬಾರ್ಡ್ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅಂದಾಜು ರೂ.೧ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಬಾಂದಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಾಂದಾರ ನಿರ್ಮಾಣದಿಂದ ಜಲಸಂಪನ್ಮೂಲ ಹೆಚ್ಚಿಸಬಹುದು. ಇದರಿಂದಾಗಿ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಈಚೆಗೆ ಮಳೆ ಪ್ರಮಾಣವು ಕಡಿಮೆಯಾಗುತ್ತಿದೆ. ಇದರಿಂದಾಗಿ ಜಲ ಸಂಪನ್ಮೂಲವನ್ನು ಕಾಪಾಡುವುದು ತುಂಬಾ ಅಗತ್ಯವಿದೆ. ಜಲವಿದ್ದರೆ ಮಾತ್ರ ಎಲ್ಲ ಜೀವಿಗಳು ಜೀವಿಸಲು ಸಾಧ್ಯ ಎಂಬುವದನ್ನು ನಾವೆಲ್ಲರೂ ಅರಿತುಕೊಂಡು ಜಲ ಸಂಪನ್ಮೂಲದ ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಣ್ಣ ನೀರಾವರಿ ಇಲಾಖೆಯ ಎಇಇ ವ್ಹಿ.ಸಿ,ವಸದ, ಜೆಇ ವ್ಹಿ.ಎಸ್.ಸುಣದಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಟಿಎಪಿಎಂಸಿ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಾ ಪಾಟೀಲ, ಉಪಾಧ್ಯಕ್ಷೆ ಕವಿತಾ ಬಡಿಗೇರ, ಸದಸ್ಯರಾದ ಭೀಮನಗೌಡ ಪಾಟೀಲ, ರೇಣುಕಾ ಮಸಬಿನಾಳ,ಶಶಿಕಾಲ ಮ್ಯಾಗೇರಿ.ಬಿ.ಚಿಕ್ಕಮಠ, ಅಬ್ದುಲ ಮುಲ್ಲಾ, ಮಹಾಂತೇಶ ದೇವಣಗಾಂವಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಬಡಿಗೇರ, ಗುತ್ತಿಗೆದಾರ ಎಸ್.ವ್ಹಿ.ರಾಠೋಡ ಇತರರು ಇದ್ದರು.
ಬಾಂದಾರ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ :ಸಚಿವ ಶಿವಾನಂದ
Related Posts
Add A Comment