ಗದಗ ತೋಂಟದ ಸಿದ್ದಲಿಂಗ ಶ್ರೀಗಳ 5 ನೇ ಪುಣ್ಯ ಸ್ಮರಣೆಯಲ್ಲಿ ಡಾ.ಸಿದ್ದರಾಮ ಸ್ವಾಮೀಜಿ ಅಭಿಮತ
ಗದಗ: ಕನ್ನಡದ ವಿದ್ವತ್ಪೂರ್ಣ ವಲಯದಲ್ಲಿ ತಮ್ಮದೇ ವಿಶಿಷ್ಟವಾದ ಛಾಪುಗರಿ ಮೂಡಿಸಿರುವ ಲಿಂ, ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಕರುನಾಡಿನ ಮೌಲಿಕ ವಿಚಾರಧಾರೆಯ ವಿರಾಟವುಳ್ಳ ಸ್ವಾಮೀಜಿಗಳಾಗಿ ಮಿನುಗಿದ್ದಾರೆ ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ ಲಿಂ,ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಐದನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಿದ್ದಲಿಂಗ ಪೂಜ್ಯರ ಭಾವನಾ ಲೋಕದ ಸಂಬಂಧಗಳು, ಅಭಿಮಾನಗಳು ಅದ್ವೈತ, ವಿಶಿಷ್ಟಾದ್ವೈತದಲ್ಲಿ ಪರಿಮಳಿಸಿವೆ. ಸತ್ವ,ತತ್ವ ಗುಣಗಳಲ್ಲಿ ಪರಮ ಪಾವಿತ್ರ್ಯ ಪಡೆದಿವೆ. ಸಮಾಜಮುಖಿ ಸೇವೆಗಳಂತೂ ಮರೆಯಲಸಾಧ್ಯ. ಅವು ಮೌಲ್ಯಭರಿತ ಪ್ರಭಾವಿಗಳಾಗಿವೆ. ಪುಸ್ತಕ, ಗ್ರಂಥಗಳ ಉತ್ಕರ್ಷ ಭಾವದಲ್ಲಿ ಮೆರೆದಿರುವ ಪೂಜ್ಯರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ತೋಂಟದ ಪೂಜ್ಯರು ಹಾಗೂ ಶ್ರೀಮಠ ವಿಶ್ವವಿದ್ಯಾಲಯ ಮಾಡದಂಥ ಪುಸ್ತಕ ಪ್ಪಕಟಣೆ ಕಾರ್ಯ ಮಾಡಿದ್ದು ನಾಡಿನಾದ್ಯಂತ ಮೆಚ್ಚುಗೆ ಪಡೆದಿದೆ ಎಂದು ಸಿದ್ದಲಿಂಗ ಶ್ರೀಗಳವರ ವ್ಯಕ್ತಿತ್ವ ಬಣ್ಣಿಸಿದರು.
ನಾಡು, ನುಡಿ, ಜಲ, ನೆಲಕ್ಕಾಗಿ ಪೂಜ್ಯರ ಶ್ರಮ ಅಮೋಘ. ಸಾಮಾಜಿಕ ಕ್ಷೇತ್ರದಲ್ಲಿ ಅವರು ಅತ್ಯಂತ ಅದರ್ಶನೀಯ ಸೇವೆ ಸಲ್ಲಿಸಿದ್ದಾರೆ. ಕನ್ನಡ ಭಾಷೆ, ಪರಿಸರದ ಉಳಿವಿಗಾಗಿ ಅನೇಕ ಹೋರಾಟಗಳಿಗೆ ಬಲ ತುಂಬಿದ್ದರು. ಆ ಎಲ್ಲ ಹೋರಾಟಗಳು ಪೂಜ್ಯರ ಮುಂಚೂಣಿಯಲ್ಲಿ ಯಶಸ್ಸುಗೊಂಡಿವೆ. ಅಂದು ನಡೆದ ಜನಪರ ಹೋರಾಟ ಗೋಕಾಕ ಚಳವಳಿಯನ್ನು ಜನ ಇಂದಿಗೂ ನೆನೆಸುತ್ತಾರೆ. ಗೋಕಾಕ ಚಳುವಳಿಗೆ ಶಕ್ತಿ ತುಂಬಿದ ಪರಿಣಾಮ ಸರಕಾರ ಗೋಕಾಕ ವರದಿ ಜಾರಿ ಮಾಡಿತು. ಪೋಸ್ಕೋ ಕಂಪನಿ ಇಲ್ಲಿಂದ ಕಾಲ್ಕಿತ್ತಲು ಶ್ರಮಿಸಿದರು. ಈ ಭಾಗದ ಹಸಿರುದೇವವಾದ ಕಪ್ಪತ್ತಗುಡ್ಡ ರಕ್ಷಣೆಗಾಗಿ ಬಹುದೊಡ್ಡ ಹೋರಾಟ ಮಾಡಿದರು. ಗಣಿಗಾರಿಕೆಗೆ ಅಂಕುಶ ಹಾಕಿದರು. ಪರಿಣಾಮ ಇಡೀ ದೇಶದಲ್ಲೇ ಪರಿಶುದ್ಧ ಗಾಳಿ ಹೊಂದಿರುವ ಮುಕುಟ, ಖ್ಯಾತಿ ಗದುಗಿಗೆ ಸಲ್ಲಿತ್ತು. ಇದಕ್ಕೆಲ್ಲ ಸಿದ್ದಲಿಂಗ ಪೂಜ್ಯರೇ ಸ್ಪೂತಿ೯. ಎಂದೂ ಮರೆಯಲಾಗದ ಮಾಣಿಕ್ಯರಾಗಿ ಸ್ವಾಮೀತ್ವದೊಂದಿಗೆ ಗೈದ ಸಮಾಜಪರ ಸೇವೆ ಬಹು ಅನನ್ಯವಾಗಿವೆ ಎಂದು ಡಾ.ಸಿದ್ದರಾಮ ಸ್ವಾಮೀಜಿಗಳು ನುಡಿದರು.
2023-24 ನೇ ಸಾಲಿನ ಡಾ.ತೋಂಟದ ಸಿದ್ದಲಿಂಗ ಪ್ರಶಸ್ತಿ ಸ್ವೀಕರಿಸಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಪ್ರಶಸ್ತಿ ಪ್ರಧಾನ ಮಾಡಿ, ಮಾತೃಹೃದಯಿ ತೋಂಟದ ಸಿದ್ದಲಿಂಗ ಪೂಜ್ಯರ ನಾಮದಡಿಯಲ್ಲಿ ಸಮಾಜಮುಖಿ ಸಾಧಕರಿಗೆ ಪ್ರಶಸ್ತಿ ಶ್ರೀಮಠದಿಂದ ಕೊಡಮಾಡುತ್ತಿರುವ ಈ ವಿಶೇಷ ಕಾರ್ಯ, ಕೈಂಕರ್ಯ ಅದರಣೀಯವಾದದ್ದು. ಪ್ರಸ್ತುತ ಎಸ್.ಎಂ.ಜಾಮದಾರ ಅವರಿಗೆ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಯ ಗೌರವವನ್ನು ಮತ್ತಿಷ್ಟು ಹೆಚ್ಚಿಸಿದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ,ಶಿವಾನಂದ ಪಟ್ಟಣ್ಣಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ದಲಿಂಗ ಪೂಜ್ಯರು ಅನುದಿನವೂ, ಅನುಕ್ಷಣವೂ, ಕಣಕಣ, ಮನಮನಗಳಲ್ಲಿ ಪೂಜಿತರು. ಕರುನಾಡಿನ ಆರಾಧ್ಯದೈವ ಪೂಜ್ಯ ಶ್ರೀಗಳವರು ಮಠಕ್ಕೆ ಸೀಮಿತಗೊಳ್ಳದೇಗೈದಿರುವ ಸಮಭಾವದ ಸಮಾಜಯುತ ಕಳಕಳಿ, ಕೈಂಕರ್ಯದ ಕೆಲಸಗಳು ಎಂದೆಂದಿಗೂ ಅಜರಾಮರ. ಅವು ಸದಾಕಾಲವೂ ಪ್ರಸ್ತುತ ಎಂದರು.
ಮುಂಡರಗಿ- ಬೈಲೂರು ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಆಳಂದ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿಗಳು, ಬೈರನಹಟ್ಟಿ ದೊರೆಸ್ವಾಮಿ, ವಿರಕ್ತಮಠದ ಶಾಂತಲಿಂಗ ಸ್ವಾಮೀಜಿಗಳು, ಶಿರೋಳ ತೋಂಟದಾರ್ಯ ಮಠದ ಗುರುಬಸವ ಸ್ವಾಮೀಜಿಗಳು ಇತರರು ಮಾತನಾಡಿದರು.
ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕ ಡಿ.ಆರ್.ಪಾಟೀಲ, ಮನೋವೈದ್ಯ ಡಾ.ಆನಂದ ಪಾಂಡುರಂಗಿ, ರಾಮಕೃಷ್ಣ ದೊಡ್ಡಮನಿ, ಕೃಷಿ ತಜ್ಞ ನಡಕಟ್ಟಿನ, ವಿವೇಕಾನಂದಗೌಡ ಪಾಟೀಲ, ವೀರನಗೌಡ ಮರಿಗೌಡ್ರ ಇತರರಿದ್ದರು.
ಸಿದ್ದಲಿಂಗ ಶ್ರೀಗಳವರ ಐದನೇ ಪುಣ್ಯ ಸ್ಮರಣೆಯಲ್ಲಿ ರಾಜ್ಯದ ವಿವಿಧಡೆಯಿಂದ ಅಪಾರ ಜನಸಾಗರ ಆಗಮಿಸಿ ಭಕ್ತಿ,ಗೌರವ ನಮನ ಸಲ್ಲಿಸಿತು. ಪೂಜ್ಯರ ಗದ್ದುಗೆ ದರುಶನ ಪಡೆದು ಪುನೀತ್ ಭಾವ ಮೆರೆದರು.