ದೇವರಹಿಪ್ಪರಗಿ ರಾವುತರಾಯ-ಮಲ್ಲಯ್ಯ ಜಾತ್ರೆ |
3 ಬಾರಿ ಬಂಡಿಯ ಅಚ್ಚು ಮುರಿತ | ಆತಂಕಗೊಂಡ ಭಕ್ತರು
ದೇವರ ಹಿಪ್ಪರಗಿ: ಐತಿಹಾಸಿಕ ಹಿನ್ನೆಲೆಯ ರಾವುತರಾಯ- ಮಲ್ಲಯ್ಯರ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭಕ್ತಿ ಭಾವದೊಂದಿಗೆ ಗುರುವಾರ ಆರಂಭವಾಯಿತು.
ಪಟ್ಟಣದ ರಾವುತರಾಯ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ನಸುಕಿನಲ್ಲಿ ಮೂಲ ದೇವಸ್ಥಾನದಿಂದ ಹೊರಡುತ್ತಿದ್ದಂತೆಯೇ ಬಂಡಿಯ ಅಚ್ಚು ಮುರಿದ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ಬಂಡಿಉತ್ಸವ ವಿಳಂಬವಾಗಿ ಬೆಳಗಿನ ೧೦ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳವನ್ನು ತಲುಪಿತು. ಇಲ್ಲಿ ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ಹೂ-ಹಾರ ಮುಡಿದು ಪುಷ್ಪಲಂಕಾರಗೊಂಡನು. ಇನ್ನೇನು ಸಡಗರದಿಂದ ಬಂಡಿ ಉತ್ಸವ ಆರಂಭಿಸಬೇಕು ಎನ್ನುವಷ್ಟರಲ್ಲಿ ಕೆಲವೇ ದೂರದ ಅಂತರದಲ್ಲಿ ಮಾನೆದೊಡ್ಡಿ ಸ್ಥಳದಲ್ಲಿ ಎರಡನೆಯ ಬಾರಿ ಬಂಡಿಯ ಅಚ್ಚು ಪುನಃ ಮುರಿದ ಕಾರಣ ೨ ಗಂಟೆಗಳ ಕಾಲ ಮತ್ತೆ ಉತ್ಸವಕ್ಕೆ ಅಡ್ಡಿಯಾಯಿತು. ಕೊನೆಗೆ ಮಧ್ಯಾನ್ಹ ೩.೩೦ ಗಂಟೆಯ ಸಮಯಕ್ಕೆ ಹೊಸದಾದ ಅಚ್ಚು ಜೋಡಿಸಿ ಉತ್ಸವ ಆರಂಭಿಸಲಾಯಿತು.
ಕಳೆದ ಒಂದು ಶತಮಾನದ ಅವಧಿಯಲ್ಲಿ ಬಂಡಿಯ ಅಚ್ಚು ೩ ಬಾರಿ ಮುರಿದು ಸೂರ್ಯಾಸ್ತದ ಸಮಯದವರೆಗೆ ಮಲ್ಲಯ್ಯನ ದೇವಸ್ಥಾನ ತಲುಪದೇ ಇರುವುದು ಹಾಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವಿಳಂಬವಾಗಿರುವ ಪ್ರಸಂಗ ಎಂದಿಗೂ ಜರುಗಿಲ್ಲ. ಇದೇ ಮೊದಲ ಬಾರಿ ಜಾತ್ರೆಯ ಆರಂಭದ ದಿನ ಇಂತಹ ಅವಘಡ ಜರುಗಿದ್ದು, ಇದು ಪಟ್ಟಣ ಸೇರಿದಂತೆ ದೇಶ, ಜಗತ್ತಿನ ಕುರಿತು ಮುಂಬರುವ ದಿನಗಳ ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಭಕ್ತಸಮೂಹ ಆತಂಕ ಪಡುವಂತಾಯಿತು.
ನಂತರ ರಾವುತರಾಯನ ಉತ್ಸವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನ ತಲುಪಿತು. ಆನಂತರ ರಾವುತರಾಯ-ಗಂಗಿಮಾಳಮ್ಮರ ಮದುವೆಯ ರೂಪಕ ಜರುಗಿತು.
ಸತತ ಐದು ದಿನಗಳ ಕಾಲ ಜರುಗುವ ಜಾತ್ರಾ ಮಹೋತ್ಸವ ಈ ಬಾರಿ ತಿಥಿಲೋಪದ ಕಾರಣ ೪ ದಿನ ಜರುಗಲಿದೆ. ಮೊದಲ ದಿನ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಆಸೀನನಾಗುವುದರೊಡನೆ ಜಾತ್ರೆಗೆ ಚಾಲನೆ ದೊರಕಿತು. ಜಾತ್ರೆಯ ಮೊದಲ ದಿನ ಆಗಮಿಸಿದ ಅಸಂಖ್ಯಾತ ಭಕ್ತರಿಗೆ ವಿವಿಧ ಭಕ್ತರಿಂದ ಅನ್ನ ಸಂತರ್ಪಣೆ ಜರುಗಿತು.