ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಗ್ರಾಮಾಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಅನುಷ್ಠಾನಗೊಳಿಸುವುದು ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಗ್ರಾಮ ಪಂಚಾಯಿತಿಗಳು ಹೆಚ್ಚಿನ ಕಾಮಗಾರಿಗಳನ್ನು ಗುರುತಿಸಿ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿದ ಅವರು, ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅಮೃತ ಸರೋವರ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರರೊಂದಿಗೆ ನೇರವಾಗಿ ಸಂವಾದ ನಡೆಸಿದ ಬಳಿಕ ಅವರು ಮಾತನಾಡಿದರು. ಕಾಮಗಾರಿ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ ಅವರು, ಪ್ರತಿದಿನ ೫೦೦ಕ್ಕೂ ಹೆಚ್ಚು ಕೂಲಿಕಾರರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಕಾಮಗಾರಿಗಳನ್ನು ಯೋಜಿತವಾಗಿ ಅನುಷ್ಠಾನಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಗಳು, ಕಾಲುವೆಗಳು ಸೇರಿದಂತೆ ಕೈಗೊಳ್ಳಬಹುದಾದ ಎಲ್ಲ ಕಾಮಗಾರಿಗಳನ್ನು ಗುರುತಿಸಿ ಯುಕ್ತಧಾರ ತಂತ್ರಾಂಶದಲ್ಲಿ ತ್ವರಿತವಾಗಿ ಅಳವಡಿಸಿ, ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸುವಂತೆ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ತ್ವರಿತವಾಗಿ ಕೂಲಿ ಪಾವತಿ: ವಿಬಿ-ಜಿ ರಾಮ್ ಜಿ ಯೋಜನೆಯಡಿ ಮುಂದಿನ ದಿನಗಳಲ್ಲಿ ಕೂಲಿ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ನಿಗದಿತ ಅವಧಿಯಲ್ಲೇ ಕೂಲಿ ಮೊತ್ತವನ್ನು ಪಾವತಿಸಲಾಗುವುದು ಎಂದು ಕೂಲಿಕಾರರಿಗೆ ಭರವಸೆ ನೀಡಿದರು. ಪ್ರತಿಯೊಬ್ಬ ಕೂಲಿಕಾರರು ಪ್ರತಿದಿನ ಎರಡು ಬಾರಿ ಎನ್ ಎಂಎಂಎಸ್ ಆಪ್ ಮೂಲಕ ನೈಜ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದ್ದು, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಉ) ಪ್ರಕಾಶ ದೇಸಾಯಿ, ಎನ್.ಪಿ.ಎಸ್. ಶಾಲೆಯ ಮುಖ್ಯ ಶಿಕ್ಷಕ ಅಶೋಕ ಟಕ್ಕಳಕಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಅಸ್ಕಿ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಸ್ವ-ಸಹಾಯ ಸಂಘದ ಸಿಬ್ಬಂದಿ, ಕಾಯಕ ಬಂಧುಗಳು, ವಿಬಿ-ಜಿ ರಾಮ್ ಜಿ ಯೋಜನೆಯ ಕೂಲಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
ಶಾಲೆಯ ಮೂಲಸೌಕರ್ಯ ಪರಿಶೀಲನೆ
ಬಳಿಕ ಮುತ್ತಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಉಪಕಾರ್ಯದರ್ಶಿಯವರು, ಶಾಲೆಯ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಬಿಸಿಯೂಟದ ಅಡುಗೆ ಕೋಣೆಯನ್ನು ವೀಕ್ಷಿಸಿ ದಾಸ್ತಾನು ಸಂಗ್ರಹ ವಹಿಯನ್ನು ಪರಿಶೀಲಿಸಿದರು.
ಸ್ವ-ಸಹಾಯ ಸಂಘಗಳ ಚಟುವಟಿಕೆಗಳ ಪರಿಶೀಲನೆ
ಮಹಿಳಾ ಒಕ್ಕೂಟ ಘಟಕಕ್ಕೆ ಭೇಟಿ ನೀಡಿ ಕಟ್ಟಡದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಸ್ವ-ಸಹಾಯ ಸಂಘದ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ವ-ಸಹಾಯ ಸಂಘಗಳ ಮಾಹಿತಿ ಪಡೆದು ಸಿಐಎಫ್ ಸಾಲ ವಿತರಣೆ ಹಾಗೂ ಸಂಘಗಳ ಆರ್ಥಿಕ ಚಟುವಟಿಕೆಗಳ ಕುರಿತು ಚರ್ಚಿಸಿದರು.
ಒಕ್ಕೂಟದ ಬ್ಯಾಂಕ್ ಖಾತೆಯ ನಿರ್ವಹಣೆಯನ್ನು ಪರಿಶೀಲಿಸಿದ ಅವರು, ಐಎಫ್ ಸಿ ಆಡಳಿತಾತ್ಮಕ ವೆಚ್ಚದಡಿ ಕಟ್ಟಡ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.
ಕರ ವಸೂಲಾತಿ ಹೆಚ್ಚಿಸಲು ಸೂಚನೆ
ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಕರ ವಸೂಲಾತಿ ಪ್ರಗತಿಯನ್ನು ಪರಿಶೀಲಿಸಿದ ಅವರು, ವಸೂಲಾತಿ ಅತೀ ಕಡಿಮೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ತಿಂಗಳ ಅಂತ್ಯದೊಳಗೆ ೧೦ ಲಕ್ಷ ರೂ. ಕರ ವಸೂಲಾತಿ ಮಾಡುವಂತೆ ಬಿಲ್ ಕಲೆಕ್ಟರ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

