ಆಲಮಟ್ಟಿ ೩ನೇ ಹಂತಕ್ಕೆ ವಿಳಂಬ ಬೇಡ | ಕಾನೂನಾತ್ಮಕ ಅಡೆತಡೆಗಳ ನೆಪ ಸಲ್ಲದು | ಜಲತಜ್ಞ ರಾಜೇಂದ್ರ ಪೊದ್ದಾರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಜಲಾಶಯದ ಮಟ್ಟವನ್ನು ೫೧೯.೬೦ ಮೀ. ನಿಂದ ೫೨೪.೨೫೬ ಮೀ. ಹೆಚ್ಚಿಸಿ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ೩ನೇ ಹಂತದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಲತಜ್ಞ ರಾಜೇಂದ್ರ ಪೊದ್ದಾರ ಆಗ್ರಹಿಸಿದರು.
ಆಲಮಟ್ಟಿಯಲ್ಲಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ನಡೆದ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳ ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, “ಒಂದರ ಮೇಲೊಂದರಂತೆ ಆಯೋಗಗಳನ್ನು ರಚಿಸಲಾಗುತ್ತಿದೆ. ಕಾನೂನಾತ್ಮಕ ಅಡೆತಡೆಗಳ ನೆಪದಲ್ಲಿ ಆಲಮಟ್ಟಿ ೩ನೇ ಹಂತದ ಯೋಜನೆಯನ್ನು ವಿಳಂಬಗೊಳಿಸುವುದು ಸರಿಯಲ್ಲ. ಕೃಷ್ಣಾ ಕೊಳ್ಳದ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು.
ರೈತ ಮುಖಂಡ ಅರವಿಂದ ಕುಲಕರ್ಣಿ, ಕೃಷ್ಣಾ ಕೊಳ್ಳದ ಏಳು ಜಿಲ್ಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ರೈತ ಮುಖಂಡ ಎಸ್.ವಿ. ಪಾಟೀಲ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಪ್ರೀಂ ಕೋರ್ಟ್ನಲ್ಲಿನ ವಿಚಾರಣೆಯಲ್ಲಿ ಅನಗತ್ಯ ಕಾಲಹರಣ ಮಾಡುತ್ತಿವೆ ಎಂದು ಆರೋಪಿಸಿ, ಕಾನೂನಾತ್ಮಕ ಹೋರಾಟದಲ್ಲಿಯೂ ಸಮಿತಿ ಭಾಗವಹಿಸಲಿದೆ ಎಂದರು.
ಕೇಂದ್ರ ಸರ್ಕಾರ, ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆ ಹೊರಡಿಸಬೇಕು, ಕೃಷ್ಣಾ ಕೊಳ್ಳದ ರೈತರ ನೀರಿನ ಹಕ್ಕನ್ನು ರಕ್ಷಿಸುವುದು, ಮುಂದಿನ ಹೋರಾಟದ ರೂಪುರೇಷೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.
ಬಿ. ಭಗವಾನ್ ರೆಡ್ಡಿ, ಭೋಗೇಶ ಸೋಲಾಪುರ, ಲಲಿತಾ ಬಿಜ್ಜರಗಿ, ಶ್ರೀನಾಥ್ ಪೂಜಾರಿ, ನೀಲಂಬಿಕಾ ಬಿರಾದಾರ, ಭರತಕುಮಾರ ಎಚ್.ಟಿ., ಎಂ. ಪಡಶೆಟ್ಟಿ, ಸುರೇಶ ಬಿಜಾಪುರ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿ.ಸಿ. ಬಿರಾದಾರ
ಸಭೆಯ ಅಧ್ಯಕ್ಷತೆ ವಹಿಸಿದ್ದರು.

