ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಕೇಸರಾಳ ತಾಂಡಾದ ಶಂಕರ ಚಾಂದುಬಾಯಿ ಕಾಲೋನಿಯಲ್ಲಿ ಸೆಪ್ಟೆಂಬರ್ ೨೮ರಂದು ಮಧ್ಯಾಹ್ನ ೩:೦೦ ಗಂಟೆಗೆ ದಿ|| ಶ್ರೀಶಂಕರ ಬಿ. ರಾಠೋಡ ಹಾಗೂ ದಿ|| ಶ್ರೀಮತಿ ಚಾಂದುಬಾಯಿ ಶಂ. ರಾಠೋಡ ಅವರ ಜಾತ್ರಾಮಹೋತ್ಸವ ಹಾಗೂ ತಾಲೂಕಾ ಬಂಜಾರ ಸಮಾಜದ ವತಿಯಿಂದ ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಅದ್ದೂರಿ ಪಕ್ಷಾತೀತ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸೋಮದೇವರಹಟ್ಟಿಯ ಶ್ರೀ ಜಗನು ಮಹಾರಾಜರು ತಿಳಿಸಿದರು.
ಬುಧವಾರ ಕೇಸರಾಳ ಎಲ್.ಟಿ.ಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾತ್ರಾಮಹೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವು ಇಡೀ ಬಂಜಾರ ಸಮುದಾಯದ ಒಗ್ಗಟ್ಟಿನ ಪ್ರದರ್ಶನವಾಗಿದೆ. ಬಂಜಾರ ಸಮುದಾಯದ ಹೆಮ್ಮೆಯ ನಾಯಕರಾದ ಸಚಿವ ರುದ್ರಪ್ಪ ಲಮಾಣಿ ಅವರನ್ನು ಪಕ್ಷಾತೀತವಾಗಿ ಗೌರವಿಸುವ ಮೂಲಕ ಸಮುದಾಯದಲ್ಲಿ ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಮುಖಂಡ ಭೀಮುಸೇಠ ಮಾತನಾಡಿ, ಸೋಮದೇವರಹಟ್ಟಿಯ ಜಗನು ಮಹಾರಾಜರು ಹಾಗೂ ಪ್ರಕಾಶ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ರುದ್ರಪ್ಪ ಲಮಾಣಿ ನೆರವೇರಿಸಲಿದ್ದು, ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಜ್ಯೋತಿ ಬೆಳಗಿಸಲಿದ್ದು, ಮಾಜಿ ಸಂಸದ ಉಮೇಶ ಜಾಧವ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣಾ ಕೌಲಗಿ, ಉದ್ಯಮಿ ಶಂಕರ ಪವಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅಂದು ರಾತ್ರಿ ಸೋನುಡೈಮಂಡ್ ಮೆಲೋಡಿಸ್ ತಂಡದಿಂದ ಜಾನಪದ ಗಾಯನ ಹಾಗೂ ಗೀತಾಂಜಲಿಬಾಯಿ ಮತ್ತು ಫುಲಸಿಂಗ ರಾಠೋಡ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಬಂಜಾರ ಸಂಘದ ಸಂಜು ಚವ್ಹಾಣ, ಲಿಂಬಾಜಿ ರಾಠೋಡ, ವಿಜಯಕುಮಾರ ರಾಠೋಡ, ಗಣಪತಿ ರಾಠೋಡ ಹಾಗೂ ಕಾಶೀನಾಥ ಪವಾರ ಮಾತನಾಡಿ, ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಬಂಜಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಧರ್ಮು ರಾಠೋಡ, ಸುಭಾಷ ತೋರತ್, ಅಪ್ಪು ಪವಾರ, ಸಿದ್ದು ರಾಠೋಡ ಉಪಸ್ಥಿತರಿದ್ದರು.

