ತಾಳಿಕೋಟೆ ತಾಲೂಕು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಣೆ | ಆದೇಶ ಪ್ರತಿ ಹಸ್ತಾಂತರಿಸಿದ ಕೃಷಿ ಅಧಿಕಾರಿ ಪಾಟೀಲ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಕಳೆದ ೨೧ ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ರೈತರು ಬುಧವಾರ ಹಿಂಪಡೆದರು.
ಧರಣಿ ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ತಹಶೀಲ್ದಾರ್ ಎಂ.ಎಚ್. ಅರಕೇರಿ ಅವರು, ತಾಳಿಕೋಟಿ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರದ ಆದೇಶದ ಪ್ರತಿಯನ್ನು ಧರಣಿ ನಿರತ ರೈತ ಮುಖಂಡರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದ್ದು, ತಾಳಿಕೋಟಿ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಪರಿಗಣಿಸಿ ಆದೇಶ ಹೊರಡಿಸಿದೆ. ಕಳೆದ ೨೧ ದಿನಗಳಿಂದ ರೈತರು ಹಗಲು-ರಾತ್ರಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಆದೇಶದ ಪ್ರತಿಯನ್ನು ಸ್ವೀಕರಿಸಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಅಧಿಕಾರಿಗಳ ಮನವಿಯ ಮೇರೆಗೆ ರೈತ ಮುಖಂಡರು ಧರಣಿಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಪಿಎಸ್‌ಐ ಜ್ಯೋತಿ ಖೋತ್, ತಾಳಿಕೋಟೆ ಕೃಷಿ ಅಧಿಕಾರಿ ಮಹೇಶ ಜೋಶಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಹನಮಂತರಾಯ ಹಂದ್ರಾಳ, ಮಡಿವಾಳಪ್ಪ ಕಲಬುರಗಿ, ಸಂಗನಗೌಡ ಟಕ್ಕಳಕಿ, ಪಾರತಗೋಳ, ಶಾಂತಗೌಡ ಬಿರಾದಾರ, ನ್ಯಾಯವಾದಿಗಳಾದ ಪ್ರಭಾಕರ ಗುಡಗಂಟಿ, ಸಂಗನಗೌಡ ಕೋಲೂರ, ಮಾಂತಗೌಡ ಮುದ್ದೂರ, ಅರುಣ ಹೊಸಮನಿ, ಚನ್ನನಗೌಡ ಬಿರಾದಾರ, ಆನಂದ ಲಿಂಗದಳ್ಳಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.
ರೈತರ ಸಮಸ್ಯೆಗಳಿಗೆ ಹೋರಾಟವೇ ಅನಿವಾರ್ಯವಾಗಬಾರದು
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ತಾಳಿಕೋಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತರು ೨೧ ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಿರುವುದು ವಿಷಾದನೀಯ. ರೈತರನ್ನು ಈ ರೀತಿ ಸತಾಯಿಸುವ ಕೆಲಸ ಮಾಡಬಾರದು. ಇಂದಿನ ದಿನಮಾನಗಳಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಟವೇ ಅನಿವಾರ್ಯವಾಗಿರುವುದು ರೈತರ ದುರ್ದೈವ ಎಂದರು.

