ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಯುರ್ವೇದ ವೈದ್ಯ ಪದ್ಧತಿ ನಗರ ಪ್ರದೇಶಗಳಿಗೆ ಸೀಮಿತವಾಗದೇ ಹಳ್ಳಿ ಹಳ್ಳಿಗಳಿಗೂ ತಲುಪಿ ವ್ಯಾಪಕವಾಗಿ ಪ್ರಚಾರಗೊಳ್ಳಬೇಕು. ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಆಯುರ್ವೇದ ಪದ್ಧತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಕರೆ ನೀಡಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ಎಎನ್‌ಎಂ-ಜಿಎನ್‌ಎಂ ತರಬೇತಿ ಸಂಸ್ಥೆಯಲ್ಲಿ ಸೆ.೨೩ರಂದು ಆರೋಗ್ಯಕರ ನಾಳೆಗಳಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ೧೧ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಧನರ್ಗಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಭುವನೇಶ್ವರಿ ಬೇಳಕುಡಕರ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿಯಿಂದ ಮಕ್ಕಳಲ್ಲಿ ಬೊಜ್ಜು, ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಧ್ಯವಯಸ್ಕರಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಕೀಲುನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣಕ್ಕೆ ಸೂಕ್ತ ಜೀವನಶೈಲಿ,ಯೋಗಾಸನ, ಪ್ರಾಣಾಯಾಮ,ಧ್ಯಾನ ಪಾಲಿಸುವುದು ಅಗತ್ಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಬಿ.ಬಿರಾದಾರ ಮಾತನಾಡಿ, ಆಯುರ್ವೇದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಈ ಪದ್ಧತಿಯ ತತ್ವಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು. ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ವಿದ್ಯಾವತಿ ಎಂ.ಅಥಣಿ ಅವರು ಮಾತನಾಡಿ, ಆಯುರ್ವೇದದ ಮಹತ್ವವನ್ನು ಸಾರ್ವಜನಿಕರಿಗೆ ತಲುಪಿಸುವುದು ದಿನಾಚರಣೆಯ ಉದ್ದೇಶವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ಬಿ.ಜಿ. ಪಾಟೀಲ ಅವರು ಆಯುರ್ವೇದ ಔಷಧಿಗಳ ಬಳಕೆ ಹಾಗೂ ಮನೆಮದ್ದುಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಬಿ.ಎಲ್.ಡಿ.ಇ. ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎ. ಪಾಟೀಲ ಅವರು ಆರೋಗ್ಯಕರ ಆಹಾರ ಪದ್ಧತಿ ಹಾಗೂ ಜೀವನಶೈಲಿ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಎಸ್. ಹೊನಮೊಡೆ, ಜಿಎನ್‌ಎಂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ ಸುರಪುರಮಠ, ಲೋಹಗಾಂವ ಮಾಜಿ ಗ್ರಾ.ಪಂ. ಅಧ್ಯಕ್ಷ ರಾಜುಗೌಡ ಬಿರಾದಾರ ಹಾಗೂ ಉಪಸ್ಥಿತರಿದ್ದರು.
ಡಾ. ಎಂ.ಎ. ಹಿರೇಮಠ ಸ್ವಾಗತಿಸಿದರು. ಡಾ. ವಿ.ಬಿ. ದೇಸಾಯಿ ನಿರೂಪಿಸಿದರು. ಡಾ. ಬಿ.ಎನ್. ವಗದುರ್ಗಿ ವಂದಿಸಿದರು.

