ಅವಳಿ ಜಿಲ್ಲೆಯ ರೈತರಿಗೆ ವಂಚನೆ | ರೈತ ಮುಖಂಡ ಅರವಿಂದ ಕುಲಕರ್ಣಿ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯತ್ತ ಸಾಗುತ್ತಿದ್ದರೂ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಬೆಳೆದ ಮುಂಗಾರು ಬೆಳೆಗಳಿಗೆ ನೀರು ನೀಡದೆ, ನದಿ ಪಾತ್ರದ ಮೂಲಕ ಸಾವಿರಾರು ಕ್ಯೂಸೆಕ್ ನೀರನ್ನು ನಾರಾಯಣಪುರಕ್ಕೆ ಹರಿಸಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದ ಕಳೆದ ೩-೪ ದಿನಗಳಿಂದ ಪ್ರತಿದಿನ ೪೦ ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರದ ಮೂಲಕ ತೆಲಂಗಾಣ ರಾಜ್ಯಕ್ಕೆ ಹರಿಸಲಾಗುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾ ಪ್ರಕಟಣೆ ನೀಡಿದ ಅವರು, “ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪ್ರಸ್ತುತ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಒಟ್ಟು ೧೧೪.೮೯೬ ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ ಬಳಕೆಗೆ ನಿರ್ಬಂಧದ ೧೭ ಟಿಎಂಸಿ ನೀರು ಹೊರತುಪಡಿಸಿ ೯೭.೩೮೬ ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ಇನ್ನೂ ನಿರಂತರವಾಗಿ ಮಳೆಯಾಗುತ್ತಿದೆ. ಜಲಾಶಯ ಬಹುತೇಕ ಭರ್ತಿಯಾಗಿದೆ” ಎಂದರು.
“ಜಲಾಶಯ ಭರ್ತಿಯಾಗುತ್ತಿದ್ದರೂ ಅವಳಿ ಜಿಲ್ಲೆಯ ಕೃಷಿಗೆ ನೀರು ಹರಿಸುತ್ತಿಲ್ಲ. ನಮ್ಮ ರೈತರು ಬೆಳೆದ ಬೆಳೆಗಳಿಗೆ ನೀರು ಕೊಡದೆ ಆಲಮಟ್ಟಿ ಆಣೆಕಟ್ಟಿನ ೧೪ ಗೇಟ್‌ಗಳ ಮುಖಾಂತರ ನದಿ ಪಾತ್ರಕ್ಕೆ ನೀರು ಹರಿಸಲಾಗುತ್ತಿದೆ. ಅತ್ತ ನಾರಾಯಣಪುರ ಜಲಾಶಯದಿಂದಲೂ ನದಿ ಪಾತ್ರಕ್ಕೆ ನೀರು ಹರಿಸಿ ತೆಲಂಗಾಣ ರಾಜ್ಯಕ್ಕೆ ನೀರು ಕೊಡಲಾಗುತ್ತಿದೆ.
ಮುಂಗಾರು ಹಂಗಾಮಿನಲ್ಲಿ ೭ ಟಿಎಂಸಿ ಹಾಗೂ ಹಿಂಗಾರು ಹಂಗಾಮಿಗೆ ೮ ಟಿಎಂಸಿ ನೀರನ್ನು ಕೃಷಿಗೆ ಕೊಡಬೇಕೆಂಬ ನಿಯಮವಿದ್ದರೂ ನಮ್ಮ ರೈತರಿಗೆ ನೀರು ಕೊಡದೆ ವಂಚಿಸಲಾಗುತ್ತಿದೆ. ಮೊದಲೇ ಬರಗಾಲದಿಂದ ಅವಳಿ ಜಿಲ್ಲೆಯ ರೈತರು ಬಸವಳಿದಿದ್ದಾರೆ. ಕಳೆದ ವರ್ಷವೂ ಮುಂಗಾರು ಹಂಗಾಮಿನಲ್ಲಿ ವಿಪರೀತ ಮಳೆಯಾಗಿ ಬೆಳೆದ ಬೆಳೆ ನೀರಿನಲ್ಲಿ ಕೊಳೆತು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು” ಎಂದು ಹೇಳಿದರು.
“ಈ ವರ್ಷವಾದರೂ ಮುಂಗಾರು ಮಳೆ ಸಮರ್ಪಕವಾಗಿ ಆಗುತ್ತದೆ ಎಂಬ ಭರವಸೆ ಇಟ್ಟುಕೊಂಡ ರೈತರು ಅಲ್ಪ-ಸ್ವಲ್ಪ ಮಳೆ ಆದ ಕಾರಣ ಮುಂಗಾರು ಬಿತ್ತನೆ ಮಾಡಿದ್ದಾರೆ. ನಂತರ ಸಂಪೂರ್ಣ ಮಳೆ ಕೈಕೊಟ್ಟಿದ್ದರಿಂದ ಮೊಳಕೆಯಲ್ಲಿಯೇ ಬೆಳೆ ಕಮರಿಹೋಗಿವೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಣೆಕಟ್ಟು ನಿರ್ಮಾಣಕ್ಕೆ ಭೂಮಿ ತ್ಯಾಗ ಮಾಡಿದ ರೈತರಿಗೆ ಬೆಲೆ ಇಲ್ಲದಂತಾಗಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲಾ ಕಾಲುವೆಗಳಿಗೆ ನೀರು ಹರಿಸಿ ಮುಂಗಾರು ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಅರವಿಂದ ಕುಲಕರ್ಣಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

