ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಇಂಡಿ:”ಕೈಗಾರಿಕಾ ವಲಯದಲ್ಲಿ ಭೂಮಿ, ಹಣ, ವಿದ್ಯುತ್ ಹಾಗೂ ಅಧಿಕಾರಿಗಳ ಸಹಕಾರವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಕೈಗಾರಿಕೆಗಳನ್ನು ಸ್ಥಾಪಿಸಿ ನಡೆಸುವುದು ಅತ್ಯಂತ ಕಷ್ಟದ ಕೆಲಸ. ಇಂತಹ ಬರದ ನಾಡಿನಲ್ಲೂ ಸಾಕಷ್ಟು ಕಷ್ಟಪಟ್ಟು ಸಣ್ಣ ಕೈಗಾರಿಕೆಯನ್ನು ತೆಗೆದು, ಅತ್ಯಂತ ಯಶಸ್ವಿಯಾಗಿ ಇವತ್ತು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾಗಿರುವುದು ನಿಂಗಣ್ಣ ಬಿರಾದಾರ್ ಅವರ ಮೆಚ್ಚುವಂತಹ ಸಾಧನೆಯಾಗಿದೆ” ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶ್ಲಾಘಿಸಿದರು.
ಭಾನುವಾರ ಇಂಡಿ ತಾಲೂಕಿನ ಹೆಮ್ಮೆಯ ಉದ್ಯಮಿ ನಿಂಗಣ್ಣ ಬಿರಾದಾರ್ ಅವರು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಂಡಿ ನಗರದ ಶಂಕರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಿಂಗಣ್ಣ ಬಿರಾದಾರ್ ಅವರು ರಾಜ್ಯ ಮಟ್ಟದ ಇಂತಹದೊAದು ಪ್ರಮುಖ ಹುದ್ದೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ, ಬರದ ನಾಡಿನಿಂದ ಬೆಂಗಳೂರಿನ ಗದ್ದುಗೆಯವರೆಗೆ ಉದ್ಯಮ ಕ್ಷೇತ್ರದಲ್ಲಿ ದಶಕಗಳ ಕಾಲ ನಿರಂತರವಾಗಿ ಶ್ರಮಿಸಿರುವ ನಿಂಗಣ್ಣ ಬಿರಾದಾರ್ ಅವರು ಮೂಲತಃ ಇಂಡಿ ಭಾಗದವರಾಗಿದ್ದು, ಹುಬ್ಬಳ್ಳಿಯಲ್ಲಿ ತಮ್ಮ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ವಿದ್ಯುತ್ ಹಾರ್ಡ್ವೇರ್ ಲೈನ್ ಸಾಮಗ್ರಿಗಳನ್ನು ಉತ್ಪಾದಿಸುವ “ಬನಶಂಕರಿ ಇಂಜಿನಿಯರ್ಸ್” ಸಂಸ್ಥೆಯ ಪಾಲುದಾರರಾಗಿರುವ ಇವರು, ಈ ಹಿಂದೆ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಇಡೀ ಕರ್ನಾಟಕದ ಸಣ್ಣ ಕೈಗಾರಿಕೆಗಳ ಒಕ್ಕೂಟದ ಸಾರಥ್ಯವನ್ನು ವಹಿಸಿಕೊಂಡಿರುವುದು ಅವರ ನಾಯಕತ್ವ ಗುಣಕ್ಕೆ ಸಾಕ್ಷಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ನಿಂಗಣ್ಣ ಬಿರಾದಾರ್ ಅವರು, “ನಮ್ಮ ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕ ಹಾಗೂ ಗ್ರಾಮೀಣ ಭಾಗಗಳಲ್ಲಿ ಕೈಗಾರಿಕಾ ಕ್ಷೇತ್ರ ಇನ್ನು ಹೆಚ್ಚು ಬೆಳೆಯಬೇಕಾಗಿದೆ, ಬೆಳೆಸಬೇಕಾಗಿದೆ. ಪ್ರಸ್ತುತ ಸಣ್ಣ ಉದ್ಯಮಿಗಳು ಎದುರಿಸುತ್ತಿರುವ ವಿದ್ಯುತ್, ತೆರಿಗೆ ಹಾಗೂ ಮೂಲಸೌಕರ್ಯಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಮತ್ತು ಹೊಸ ಕೈಗಾರಿಕಾ ನೀತಿಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗುವಂತೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿದ್ದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ಕಾಸಿಯಾ ಸಂಸ್ಥೆಯ ಮೂಲಕ ರಾಜ್ಯದ ಸಣ್ಣ ಕೈಗಾರಿಕೆಗಳನ್ನು ನಿಂಗಣ್ಣ ಬಿರಾದಾರ್ ಅವರು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ, ಗಡಿ ಭಾಗದ ಇಲ್ಲಿಯೂ ಅವರ ಸಂಸ್ಥೆಯ ಮೂಲಕ ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲಿನ ಜನರಿಗೆ ಕೆಲಸ ಸಿಗುವಂತಾಗಲಿ ಎಂದು ಆಶೀರ್ವದಿಸಿದರು.
ರಾಜ್ಯ ಸಣ್ಣ ಕೈಗಾರಿಕೆ ಸಂಘದ ಹಿಂದಿನ ಅಧ್ಯಕ್ಷರಾದ ಹಣಮಂತೆಗೌಡ, ನರಸಿಂಹಮೂರ್ತಿ, ಕೆ.ಬಿ.ಅರಸಾಪುರ ಮತ್ತು ಹಾಲಿ ಉಪಾಧ್ಯಕ್ಷ ಎಚ್.ಎನ್ ರಾಮಕೃಷ್ಣ, ಜೆಡಿ ಎಸ್ ಧುರೀಣ ಬಿ.ಡಿ.ಪಾಟೀಲ, ಬಿಜೆಪಿ ಧುರೀಣ ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಶಿಕ್ಷಕ ವೈ.ಜಿ. ಬಿರಾದಾರ, ಬಿ.ವೈ. ಗೊರನಾಳ, ಮಂಜುನಾಥ ತೆನ್ನೆಳ್ಳಿ, ಭೀಮಾಶಂಕರ ಮುರಗುಂಡಿ, ಪೂರ್ವಿ ಬಿರಾದಾರ, ಶಾನ್ವಿ ಬಿರಾದಾರ ಮಾತನಾಡಿದರು.
ವೇದಿಕೆಯ ಮೇಲೆ ವಿ.ಎಚ್.ಬಿರಾದಾರ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಡಿ.ಆರ್.ಶಹಾ, ಶ್ರೀಮಂತ ಇಂಡಿ, ಬಿ.ಎಚ್.ಬಿರಾದಾರ, ಪ್ರಭುಗೌಡ ಬಿರಾದಾರ, ಮುತ್ತು ದೇಸಾಯಿ, ಶಾಂತುಗೌಡ ಬಿರಾದಾರ, ಜಗದೀಶ ಕ್ಷತ್ರಿ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ಪ್ರಕಾಶ ಬಿರಾದಾರ, ರಾಜು ಹದಗಲ್, ಶಾಂತು ತೆನ್ನೆಳ್ಳಿ, ಅನೀಲಗೌಡ ಬಿರಾದಾರ, ಅಭಿನಂದನ ಕಿರಣಗಿ, ಚಂದ್ರಶೇಖರ ರೂಗಿ, ಮಂಜುನಾಥ ದೇವರ, ಶಾಂತು ತೆನ್ನೆಳ್ಳಿ, ಸಂತೋಷ ಕಕ್ಕಳಮೇಲಿ, ಸತೀಶ ಝಂಪಾ ಸೇರಿದಂತೆ ಮತ್ತಿತರರಿದ್ದರು.

