ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಜಾಗೃತ ಸಮಿತಿ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅಭಿಯಾನದ ಸಮಾರಂಭವು ಪಟ್ಟಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಚಾಲನೆ ನೀಡಿದರು
ಈ ವೇಳೆ ಆಶಯ ನುಡಿಗಳನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ, ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು, ಮೊಬೈಲ್ ಮಾಯೆಯ ಮೋಹದಿ ಬಳಲುತ್ತಿರುವ ಜನತೆಯನ್ನು, ಪುಸ್ತಕ ಓದಿನ ಕಡೆಗೆ ಗಮನ ಸೆಳೆಯಲು ಆಯೋಜಿಸಲಾಗಿದ್ದು, ಪುಸ್ತಕ ಓದಿದರೆ ಮಸ್ತಕದ ಜೊತೆಗೆ ತನು-ಮನವು ಕ್ರಿಯಾಶೀಲವಾಗುತ್ತೆ, ಆದ್ರೆ ಅತಿಯಾದ ಮೊಬೈಲ್ ಬಳಕೆಯಿಂದ ದೇಹವು ಅನಾರೋಗ್ಯದ ಕಡೆಗೆ ಸಾಗುತ್ತಿದೆ ಆದರಿಂದ ಪ್ರತಿಯೊಂದು ಮನೆಯಲ್ಲೂ ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ಮೂಲಕ ಜ್ಞಾನವೃದ್ಧಿ ಹಾಗೂ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು.
ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಪುರಾಣಿಕ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕಿ ಡಾ.ಶೋಭಾದೇವಿ ಚಕ್ಕಿ, ರೇವಣಸಿದ್ದಪ್ಪ ದುಖಾನ, ರೇವಣಸಿದ್ದಯ್ಯ ಮಠಪತಿ, ಆರ್, ಜಿ, ಪುರಾಣಿಕ್, ಗೊಲ್ಲಾಳಪ್ಪಗೌಡ ಚನ್ನಪ್ಪಗೌಡ್ರು, ಹಬೀಬ್ ಸಾಬ್ ಮುಲ್ಲಾ ಕೊಂಡಗೂಳಿ, ಸಂತೋಷ ಕುಲಕರ್ಣಿ ಇತರರಿದ್ದರು.
ಅಭಿನಂದನಾ ಸತ್ಕಾರ
ಮನೆಯಲ್ಲಿ ಗ್ರಂಥಾಲಯದ ಏರ್ಪಾಡು ಮಾಡಿದ ಯಡ್ರಾಮಿ ಪಟ್ಟಣದ ಯುವ ಸಾಹಿತಿ, ಪತ್ರಕರ್ತ, ಡಾ.ಮಲ್ಲಿಕಾರ್ಜುನ ಆಲಮೇಲ್, ಸಾಹಿತಿ ಅಮೃತ ದೊಡ್ಡಮನಿ, ಪುಸ್ತಕ ಪ್ರೇಮಿಗಳಾದ ಚಂದ್ರಶೇಖರ ಪುರಾಣಿಕ, ದೇವಿಂದ್ರಪ್ಪಗೌಡ ಸರಕಾರ, ಮಲ್ಲಾರಾವ ಬಿ. ಕುಲಕರ್ಣಿ, ಶಿಕ್ಷಕರಾದ ಅಲ್ಲಾಪಟೇಲ್ ಚಿಂಚೋಳಿ ಮತ್ತು ಬಸ್ಸೇಟೆಪ್ಪ ವಾರದ ಅವರ ಮನೆಗಳಿಗೆ ತೆರಳಿ ಅಭಿನಂದನಾ ಪತ್ರ ನೀಡಿ ಗೌರವಪೂರ್ವಕವಾಗಿ ಸತ್ಕರಿಸಲಾಯಿತು.

