ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜೂ.೩೦ರಿಂದ ಆರಂಭವಾದ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆ.೧೭ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ೨,೫೧,೭೬೧ ಮತದಾರರ ಮನೆಗಳಿಗೆ ಭೇಟಿ ನೀಡಿ, ಪರಿಷ್ಕರಣೆ ಅರ್ಜಿಗಳ ಎರಡು ಪ್ರತಿಗಳನ್ನು ವಿತರಣೆ ಮಾಡಿದ್ದಾರೆ. ಇಲ್ಲಿಯವರೆಗೆ ೧,೧೨,೬೮೨ ಪುರುಷರು ಹಾಗೂ ೧,೦೫,೯೬೪ ಮಹಿಳೆಯರು ಸೇರಿದಂತೆ ಒಟ್ಟು ೨,೧೮,೬೭೧ ಮತದಾರರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ವಿನಯಕುಮಾರ್ ಪಾಟೀಲ ಹೇಳಿದರು.
ಸಿಂದಗಿ ನಗರದ ತಾಲೂಕು ಆಡಳಿತ ಸಭಾಂಗಣದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.೨೬ರವರೆಗೆ ಅವಕಾಶವಿದ್ದು, ಇದುವರೆಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿಲ್ಲ. ೨೦೦೨ ಹಾಗೂ ೨೦೨೫ರ ಮತದಾರರ ಪಟ್ಟಿಯಲ್ಲಿನ ರಕ್ತಸಂಬಂಧ ಆಧಾರಿತ ಮ್ಯಾಪಿಂಗ್ ಹಾಗೂ ಪರಿಷ್ಕರಣೆ ಅರ್ಜಿ ಸಲ್ಲಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಸಿಂದಗಿ ತಾಲೂಕಿನ ೪೮೯, ಆಲಮೇಲ ತಾಲೂಕಿನ ೧,೨೬೬ ಹಾಗೂ ಇಂಡಿ ತಾಲೂಕಿನ ೩ಮತದಾರರು ಸೇರಿ ಒಟ್ಟು ೧,೭೫೮ ಮಂದಿಗೆ ಸೆ.೧ರಿಂದ ನೋಟಿಸ್ ಜಾರಿ ಮಾಡಲಾಗಿದೆ. ಈ ಪೈಕಿ ಸೆ.೮ರಿಂದ ೫೬೨ ಜನರ ವಿಚಾರಣೆ ನಡೆಸಲಾಗಿದೆ. ಉಳಿದ ೧,೧೯೬ ಮಂದಿಯಲ್ಲಿ ೮೯೯ ಮಂದಿಗೆ ವಿಚಾರಣೆಯ ದಿನಾಂಕ ನಿಗದಿಪಡಿಸಲಾಗಿತ್ತು. ಕಾರಣಾಂತರಗಳಿಂದ ಕೆಲವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಮ್ಮೆ ದಿನಾಂಕ ನಿಗದಿಪಡಿಸಲಾಗುವುದು. ಇನ್ನೂ ೨೯೩ ಮತದಾರರ ವಿಚಾರಣೆ ಅಂತಿಮ ಹಂತದಲ್ಲಿದ್ದು, ಪ್ರಕ್ರಿಯೆ ಪೂರ್ಣಗೊಳಿಸಲು ಅ.೨೪ರವರೆಗೆ ಕಾಲಾವಕಾಶ ನೀಡಲಾಗಿದೆ. ಬಳಿಕ ಸಿಂದಗಿ ವಿಧಾನಸಭಾ ಮತಕ್ಷೇತ್ರ-೩೩ರಲ್ಲಿ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ-೨೦೨೬ರ ಅಂತಿಮ ಪ್ರಕ್ರಿಯೆ ಪೂರ್ಣಗೊಳಿಸಿ ಅ.೨೭ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಶಿರಸ್ತೇದಾರ್ ಎಂ.ಎಂ.ಚಟ್ಟರಕಿ ಇದ್ದರು.
“ವಿಚಾರಣೆಗೆ ಹಾಜರಾಗದವರಿಗೆ ಮತ್ತೊಂದು ಅವಕಾಶ: ಉಳಿದ ೮೯೯ ಜನರ ವಿಚಾರಣೆಯ ದಿನಾಂಕ ನಿಗದಿಯಾಗಿದ್ದರೂ, ಕಾರಣಾಂತರಗಳಿಂದ ಕೆಲವರು ಹಾಜರಾಗಿಲ್ಲ. ಹೀಗಾಗಿ ಹಾಜರಾಗದವರಿಗೆ ಮತ್ತೊಮ್ಮೆ ವಿಚಾರಣೆಯ ದಿನಾಂಕ ನಿಗದಿಪಡಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಯ ಜೊತೆಗೆ ತಹಶೀಲ್ದಾರ್ ಕಾರ್ಯಾಲಯಕ್ಕೆ ಬಂದು ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು.”
– ವಿನಯಕುಮಾರ ಪಾಟೀಲ
ನೋಂದಣಾಧಿಕಾರಿ

