ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮತಕ್ಷೇತ್ರದ ಆಲಮೇಲದ ಜಮೀನಿನಲ್ಲಿ ಬೆಳೆದಿರುವ ಮೆಣಸಿನ ಸಸಿಗಳನ್ನು ಉಳಿಸಿಕೊಳ್ಳಲು ಬ್ಯಾರಲ್‌ನಲ್ಲಿ ನೀರನ್ನು ಸಂಗ್ರಹಿಸಿ ತಂಬಿಗೆಯ ಮೂಲಕ ಒಂದೊಂದೇ ಸಸಿಗೆ ರೈತ ಶಿವಾನಂದ ಅಮರಗೊಂಡ ನೀರುಣಿಸಲಾಗುತ್ತಿದ್ದಾರೆ.
ಮಳೆ ಕೈಕೊಟ್ಟ ಪರಿಣಾಮ ಕೃಷಿ ವೆಚ್ಚ ಹೆಚ್ಚಾದ ಕಾರಣ ಸಸಿಗಳು ಒಣಗದಂತೆ ಬದುಕಿಸಲು ಹೀಗೆ ಮಾಡುವುದು ಅನಿವಾರ್ಯವಾಗಿದೆ. ಇನ್ನೇನು ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅಲ್ಪಸ್ವಲ್ಪ ಸುರಿದ ಮಳೆಯನ್ನು ನಂಬಿ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದ ರೈತರಿಗೆ ಇದೀಗ ಮಳೆಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಬಿಸಿಲಿನ ತಾಪಕ್ಕೆ ಹೊಲದಲ್ಲಿನ ಸಸಿಗಳು ಬಾಡಲಾರಂಭಿಸಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತಿದ ರೈತರು ಈಗ ಆತಂಕದಲ್ಲಿದ್ದಾರೆ. ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ ಕಂಗಾಲಾಗಿರುವ ರೈತರ ಪರಿಸ್ಥಿತಿ ದೇವರೇ ಬಲ್ಲ ಎನ್ನುವಂತಾಗಿ ಅನ್ನದಾತನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ವರುಣ ದೇವ ಕೃಪೆ ತೋರಿ ರೈತರ ಕಣ್ಣೀರನ್ನು ಒರೆಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

