ಬಿ.ಎಲ್.ಡಿ.ಇ- ರಘುಕುಲ ಸಮನ್ವಯ ಶಾಲೆ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶೇಷಚೇತನ ಮಕ್ಕಳು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರಿಗೂ ಎಲ್ಲ ಮಕ್ಕಳಂತೆ ಸಮಾನ ಶಿಕ್ಷಣ, ಸಮಾನ ಅವಕಾಶ ಹಾಗೂ ಗೌರವಯುತ ಬದುಕು ದೊರೆಯುವಂತೆ ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ನಗರದ ಪ್ರಕೃತಿ ಕಾಲನಿಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾಗಿರುವ ಬಿ.ಎಲ್.ಡಿ.ಇ- ರಘುಕುಲ ಸಮನ್ವಯ ಶಾಲೆ ಉದ್ಟಾಟಿಸಿ ಅವರು ಮಾತನಾಡಿದರು.
ವಿಶೇಷಚೇತನ ಮಕ್ಕಳ ಸಬಲೀಕರಣಕ್ಕೆ ಸಮರ್ಪಕ ಹೆಜ್ಜೆಯಾಗಿ ಬಿ.ಎಲ್.ಡಿ.ಇ-ರಘುಕುಲ ಸಮನ್ವಯ ಶಾಲೆ ಪ್ರಾರಂಭಿಸಲಾಗಿದೆ. ಪ್ರತಿಯೊಂದು ವಿಶೇಷಚೇತನ ಮಗುವಿನ ಕನಸಿಗೆ ರೆಕ್ಕೆ ನೀಡಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವದಿಂದ ಬದುಕಲು ಅವಕಾಶ ಕಲ್ಪಿಸುವ ಶಿಕ್ಷಣ ಕೇಂದ್ರವಾಗಿ ಈ ಶಾಲೆ ರೂಪುಗೊಳ್ಳಲಿದೆ. ಇದು ರಾಷ್ಟ್ರಕ್ಕೆ ಮಾದರಿಯಾಗುವ ವಿಶ್ವಾಸವಿದೆ. ಇಲ್ಲಿರುವ ಆಧುನಿಕ ವಿಶಾಲ ಕಟ್ಟಡ, ಸಕಲ ಸೌಕರ್ಯಗಳನ್ನು ಹೊಂದಿರುವ ಕೊಠಡಿಗಳು, ಬೋಧಕ ಮತ್ತು ಆರೈಕೆ ಸಿಬ್ಬಂದಿಯ ನಿಸ್ವಾರ್ಥ ಸೇವೆ ವಿಶೇಷಚೇತನ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿವೆ. ಎಲ್ಲೆಡೆ ಇಂಥ ಶಾಲೆಗಳು ಆರಂಭವಾಗಿ ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಯಾಗಬೇಕು. ನಾನು ತಿಂಗಳಿಗೆ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಶಾಸಕ ಸುನಿಲಗೌಡ ಪಾಟೀಲ ಮಾತನಾಡಿ, ಬಸವ ನಾಡಿನಲ್ಲಿ ಇದು ಅಪರೂಪದ ಶಾಲೆಯಾಗಿದೆ. ವಿಶೇಷ ಚೇತನ ಮಕ್ಕಳನ್ನು ಸಾಕಿ ಸಲಹುವುದು ಮತ್ತು ಅವರಿಗೆ ಕಲಿಸುವುದು ಸವಾಲಿನ ಕೆಲಸವಾಗಿದೆ. ಅಂಥ ಮಕ್ಕಳಿಗೆ ಈ ಶಾಲೆ ಸಂಜೀವಿನಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಜಡೆ-ಸೊರಬ ಮಠದ ಶ್ರೀ ಮಹಾಂತ ಸ್ವಾಮೀಜಿ, ನಿಡೋಣಿಯ ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀಗಳು, ಮಾಜಿ ಶಾಸಕರಾದ ಪ್ರೊ. ರಾಜು ಆಲಗೂರ, ಸೋಮನಗೌಡ ಪಾಟೀಲ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಎಸ್. ಸಂಬಣ್ಣಿ, ಸಂಭವ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕ ರಾಜೇಂದ್ರ ರುಣವಾಲ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಡಾ. ಆರ್. ವಿ. ಕುಲಕರ್ಣಿ, ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ. ಎನ್. ಬೆಂಟೂರ, ಸಂಸ್ಥೆಯ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ, ಮುಖಂಡರಾದ ನಿರ್ಮಲ ರುಣವಾಲ, ನರೇಂದ್ರ ಓಸ್ವಾಲ್, ಕೆಎಲ್‌ಇ ವಿವಿಯ ಡಾ. ಅವಿನಾಶ ಕವಿ, ಏಕನಾಥ ಜಾಧವ, ಈಶ್ವರ ಬಾಗೋಜಿ, ಸವಿತಾ ದೇಶಮುಖ, ದಾನಮ್ಮ ಮಜ್ಜಗಿ ಮುಂತಾದವರು ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣೆ ಶಿಬಿರ
ಉದ್ಗಾಟನೆ ಕಾರ್ಯಕ್ರಮದ ಬಳಿಕ ಬಿ. ಎಲ್. ಡಿ.ಇ ಆಸ್ಪತ್ರೆಯ ವತಿಯಿಂದ ವಿಶೇಷಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಚಿಕ್ಕಮಕ್ಕಳ ತಜ್ಞರು, ಶ್ರವಣದೋಶ ವೈದ್ಯರು, ಫಿಜಿಯೋಥೆರಪಿ, ಎಲುಬು ಮತ್ತು ಕೀಲು, ಮೆಡಿಸಿನ್ ಮುಂತಾದ ವಿಭಾಗಗಳ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.

