ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪ್ರತಿ ವರ್ಷವೂ ನಡೆಯುವಂತೆ ಈ ವರ್ಷವೂ ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿಯ ಉಗಮಸ್ಥಳ ಮಹಾಬಳೇಶ್ವರದಲ್ಲಿ ಗಂಗಾಪೂಜೆ ನೆರವೇರಿಸಲು ಅವಳಿ ಜಿಲ್ಲೆಯ ರೈತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಯುವ ಮುಖಂಡರಾದ ಜಗದೀಶ ಸುನಗದ ಮತ್ತು ಈರಯ್ಯ ಹ. ಮಠಪತಿ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಪಂಚನದಿಗಳು ಗೋಮಾತೆಯ ಬಾಯಿ ಮೂಲಕ ಹರಿಯುವ ಪವಿತ್ರ ಕ್ಷೇತ್ರವಾದ ಮಹಾಬಳೇಶ್ವರದಲ್ಲಿ ಗಂಗಾಪೂಜೆ ನೆರವೇರಿಸಲಾಗುತ್ತಿದೆ. ವರ್ಷಪೂರ್ತಿ ಕೃಷ್ಣಾ ನದಿ ಮೈದುಂಬಿಕೊಂಡು ನದಿ ಪಾತ್ರದ ಸಕಲ ಜೀವಿಗಳಿಗೆ ಜಲ ಒದಗಿ ಪಾವನಗೊಳಿಸಲಿ ಎಂಬ ಸಂಕಲ್ಪದೊಂದಿಗೆ ಈ ಪೂಜೆ ನಡೆಯುತ್ತಿದೆ ಎಂದು ತಿಳಿಸಿದರು.
ಈ ಹಿನ್ನೆಲೆ ರೈತರು ಇಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ಗಂಗಾಪೂಜೆಯನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ದಿನಾಂಕ 28 ಮಂಗಳವಾರ ಮುಂಜಾನೆ 9.30ಕ್ಕೆ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಿಜಯಪುರ–ತಿಕೋಟಾ–ಜತ್ತ–ಕರಾಡ–ಸಾತಾರ ಮಾರ್ಗವಾಗಿ ಮಹಾಬಳೇಶ್ವರಕ್ಕೆ ಪ್ರಯಾಣ ಕೈಗೊಳ್ಳಲಾಗುವುದು. ಅಲ್ಲಿ ವಸತಿ ಮಾಡಿಕೊಂಡು ಮರುದಿನ ಬುಧವಾರ ನಸುಕಿನ ಜಾವ ಮಹಾಬಳೇಶ್ವರದಲ್ಲಿರುವ ಉದ್ಭವ ಲಿಂಗ ಹಾಗೂ ಕೃಷ್ಣಾ ನದಿ ಉಗಮ ಸ್ಥಳದಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನೂರಾರು ರೈತರೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
