ಮಾದಕ ವ್ಯಸನ ಮುಕ್ತ ಯುವ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಇಂದಿನ ಯುವ ಪೀಳಿಗೆಯು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿರುವುದು ರಾಷ್ಟ್ರದ ಭವಿಷ್ಯಕ್ಕೆ ದೊಡ್ಡ ಸವಾಲಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗದೆ, ಶಿಕ್ಷಣದ ಮೂಲಕ ದೇಶದ ಸದೃಢ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.
ಅವರು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಶನಿವಾರ ಜಿ.ಎ. ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಥಣಿ ಪೊಲೀಸ್ ಠಾಣೆ ವತಿಯಿಂದ ಮಾದಕ ವ್ಯಸನ ಮುಕ್ತ ಯುವ ಸಮುದಾಯ ಜಾಗೃತಿ ಕಾರ್ಯಕ್ರಮ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಬಗ್ಗೆ ಅಪಾರ ಕನಸು ಕಂಡಿರುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಈ ರೀತಿ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ. ವ್ಯಸನಮುಕ್ತ ಸಮಾಜ ನಿರ್ಮಾಣವಾದಾಗ ಮಾತ್ರ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳಿ ಮಾತನಾಡಿ ಇತ್ತೀಚೆಗೆ ಯುವಕರು ಅಪರಿಚಿತರ ಆಕರ್ಷಣೆ ಮತ್ತು ಕೆಟ್ಟ ಸಂಗಡದಿಂದ ಮಾದಕ ಜಾಲಕ್ಕೆ ಸಿಲುಕಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ
ಇದನ್ನು ತಡೆಯಲು ಪೊಲೀಸ್ ಇಲಾಖೆ “ಬೇಡ ಬ್ರೋ” ಎಂಬ ಸ್ಲೋಗನ್ ಮೂಲಕ ಅಭಿಯಾನ ಆರಂಭಿಸಿದೆ. ಯಾರಾದರೂ ನಿಮಗೆ ವ್ಯಸನಕ್ಕೆ ಆಹ್ವಾನ ನೀಡಿದರೆ ಒಂದೇ ಮಾತಿನಲ್ಲಿ ‘ಬೇಡ ಬ್ರೋ’ ಎಂದು ನಿರಾಕರಿಸಿ. ಮಾದಕ ದ್ರವ್ಯ ಮಾರಾಟ, ಸಾಗಣೆ ಅಥವಾ ಸೇವನೆ ಕಂಡುಬಂದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಿರ್ಭಯವಾಗಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು
ಈ ಸಂದರ್ಭದಲ್ಲಿ ಡಾ. ರಾಮ ಕುಲಕರ್ಣಿ, ಸಂದೀಪ ಸಂಗ್ರಾಮ, ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐಗಳಾದ ಗಿರಮಲಪ್ಪ ಉಪ್ಪಾರ, ಮಲ್ಲಿಕಾರ್ಜುನ ತಳವಾರ, ರಾಜು ಗುಡೋಡಗಿ, ಮುರುಗೇಶ್ ಅವಟಿ, ಎಸ್.ವಿ. ದಾಸರೆಡ್ಡಿ, ಎಂ.ಪಿ. ಮೇತ್ರಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ನೂರಾರು ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪಿಎಸ್ಐ ಗಿರಿಮಲ್ಲಪ್ಪ ಅವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು.

