ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಚ್‌ಪಿವಿ ಲಸಿಕೆ ಆಧುನಿಕ ಜೈವಿಕ ತಂತ್ರಜ್ಞಾನದ ಮೆಡಿಕಲ್ ಡೋಸ್ ಎಂದು ಹೇಳಬಹುದಾಗಿದೆ. ಶಿಫಾರಸು ಮಾಡಿರುವ ವಯಸ್ಸಿನಲ್ಲಿ ಲಸಿಕೆಯನ್ನು ನೀಡಿದಾಗ, ವೈರಸ್ ದೇಹವನ್ನು ಪ್ರವೇಶಿಸುವ ಮೊದಲು, ಅಂದರೆ ಸೂಕ್ತ ವಯಸ್ಸಿನಲ್ಲಿ(ಪ್ರಮುಖವಾಗಿ ೯ ರಿಂದ ೧೪ ವರ್ಷದೊಳಗೆ) ಈ ಲಸಿಕೆಯನ್ನು ನೀಡಿದರೆ, ಶೇ ೯೦ ರಷ್ಟು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ನಗರ ವೈದ್ಯಾಧಿಕಾರಿ ಅಬ್ದುಲ್‌ಅಹಿದ್ ಮಾಗಿಯವರು ಹೇಳಿದರು.
ಶುಕ್ರವಾರದಂದು ನಗರದ ಬಂಜಾರಾ ಪ್ರೌಢ ಶಾಲೆ ಹಾಗೂ ಎಪಿಎಂಸಿಯ ನಗರ ಆರೋಗ್ಯ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೧೪ ವರ್ಷದೊಳಗಿನ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ವ್ಯಾಕ್ಸಿನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು. ಇದು ಕೇವಲ ಆರೋಗ್ಯ ರಕ್ಷಣೆಯಲ್ಲ, ಇದೊಂದು ಸಬಲೀಕರಣದ ಯೋಜನೆ. ಸಮಯೋಚಿತವಾಗಿ ಲಸಿಕೆಯನ್ನು ಆರಿಸಿಕೊಳ್ಳುವ ಮೂಲಕ, ನಾವು ಭಯದ ಜಾಗದಲ್ಲಿ ಭರವಸೆಯನ್ನು ಮತ್ತು ಅನಿಶ್ಚಿತತೆಯ ಜಾಗದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಹುದು. ಕ್ಯಾನ್ಸರ್ ಎಂಬ ಮಹಾಮಾರಿಯು ಜೀವವನ್ನು ಕಿತ್ತುಕೊಳ್ಳುವ ಮೊದಲೇ ಅದನ್ನು ಹತ್ತಿಕ್ಕುವ ಶಕ್ತಿ ಈ ಲಸಿಕೆಗಿದೆ ಎನ್ನುವುದು ಗಮನಿಸಬೇಕಾದ ವಿಚಾರ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದು ಹಿರೇಕುರುಬರ ಮಾತನಾಡುತ್ತ. ಲಸಿಕೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ವೈಜ್ಞಾನಿಕ ಪುರಾವೆಗಳನ್ನು ಜನರಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಶಾಲೆಯ ಮುಖ್ಯಗುರು ಇ.ಡಿ.ಲಮಾಣಿ ಮಾತನಾಡಿದರು.
ಈ ವೇಳೆಯಲ್ಲಿ ಪ್ರಾಥಮಿಕ ಸುರಕ್ಷಣಾಧಿಕಾರಿ ಜ್ಯೋತಿ ಲಾಳಸಂಗಿ, ಆರೋಗ್ಯ ಸಿಬ್ಬದಿಗಳಾದ ಸವಿತಾ ಸಜ್ಜನ, ಗಿರಿಜಾ ಹೂಗಾರ, ಹೀನಾ ಜಮಾದಾರ, ಸುರೇಖಾ ಆಹೇರಿ, ಸುಧಾ ಚಲವಾದಿ ಹಾಗೂ ಆಶಾ ಕಾರ್ಯಕರ್ತೆಯರಾದ ಚಂದ್ರಕಲಾ ಹೊಸಮನಿ, ಆರತಿ ಸಾವಳಗಿ, ಪವಿತ್ರಾ ಬಡಿಗೇರರವರು ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

