ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ನಿಯಂತ್ರಿಸುವುದು ಹಾಗೂ ರಾಷ್ಟ್ರದಲ್ಲಿ ಕೆಲವೊಂದು ದುಷ್ಟ ಶಕ್ತಿಗಳು ಕಾನೂನು-ಸುವ್ಯವಸ್ಥೆಯ ಹಾಳು ಮಾಡುತ್ತಿವೆ ಎಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶುಕ್ರವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ನಂತರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಲಿಖಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ರಾಜ್ಯಾದ್ಯಂತ ಅಕ್ಷರಶಃ ಗೂಂಡಾ ರಾಜ್ ಸೃಷ್ಟಿಯಾಗಿದೆ. ಆಡಳಿತ ಪಕ್ಷದ ಕುಮ್ಮಕ್ಕಿನಿಂದ ಸಮಾಜಘಾತುಕ ಶಕ್ತಿಗಳು ಮತ್ತು ಗೂಂಡಾಗಳು ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಸಾರ್ವಜನಿಕರ ಮೇಲೆ ನಿರಂತರ ದೌರ್ಜನ್ಯ, ಬೆದರಿಕೆ ಹಾಗೂ ಹಲ್ಲೆಗಳು ನಡೆಯುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ದೂರು ನೀಡಿದರೂ ಕಿಡಿಗೇಡಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲ. ವಿರೋಧದ ದನಿಯನ್ನು ಅಡಗಿಸುವ ದಮನಕಾರಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಇದರಿಂದ ಜನಸಾಮಾನ್ಯರು, ಮಹಿಳೆಯರು ಭೀತಿಯ ವಾತಾವರಣದಲ್ಲಿ ಬದುಕುವಂತಾಗಿದೆ ಎಂದರು.
ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಉಮೇಶ ಕಾರಜೋಳ, ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ವಿವೇಕಾನಂದ ಡಬ್ಬಿ, ಮಹೇಂದ್ರಕುಮಾರ ನಾಯಕ, ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಕೃಷ್ಣಾ ಗುನ್ಹಾಳಕರ, ಚಿದಾನಂದ ಚಲವಾದಿ, ಮಲ್ಲಿಕಾರ್ಜುನ ಜೋಗೂರ, ಸ್ವಪ್ನಾ ಕಣಮುಚನಾಳ, ರಾಹುಲ ಜಾಧವ, ಮಹೇಶ ಒಡೆಯರ, ರಾಜಶೇಖರ ಮಗಿಮಠ, ಮಂಜುನಾಥ ಮಿಸೆ, ರವಿಕಾಂತ ಬಗಲಿ, ರಾಘವೇಂದ್ರ ಕಾಪಸೆ, ರವಿಕಾಂತ ವಗ್ಗೆ, ಸಚೀನ ಬೋಂಬಳೆ, ಭೀಮಸಿಂಗ ರಾಠೋಡ, ಸಂದೀಪ ಪಾಟೀಲ, ಸಂತೋಷ ಪಾಟೀಲ ಡಂಬಳ, ಚಂದ್ರಶೇಖರ ಪಾಟೀಲ, ಸಿದ್ದಗೊಂಡ ಬಿರಾದಾರ, ಸಂತೋಷ ಕುರದಡ್ಡಿ, ಹಣಮಂತ್ರಾಯಗೌಡ ಪಾಟೀಲ ಪಾಲ್ಗೊಂಡಿದ್ದರು.

