ಏಕಲಮಟ್ಟಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ | ರಸ್ತೆ ತಡೆ | ಉರುಳು ಸೇವೆ | ರಸ್ತೆ ಮಧ್ಯೆಯೇ ಅಡುಗೆ ಮಾಡಿ ಊಟ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಬಹುನಿರೀಕ್ಷಿತ ಚಿಕ್ಕಲಕಿ–ತೊದಲಬಾಗಿ–ಏಕಲಮಟ್ಟಿ ಏತ ನೀರಾವರಿ ಯೋಜನೆ ಕಾಮಗಾರಿ ಆರಂಭವಾಗಿ ಸುಮಾರು 13 ವರ್ಷಗಳು ಕಳೆದರೂ ರೈತರ ಜಮೀನುಗಳಿಗೆ ಇನ್ನೂ ನೀರು ಹರಿಯದಿರುವುದನ್ನು ಖಂಡಿಸಿ ಶುಕ್ರವಾರ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು ವಿಜಯಪುರ–ಧಾರವಾಡ ಮುಖ್ಯ ಹೆದ್ದಾರಿಯನ್ನು ತಡೆದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ, ನೂರಾರು ರೈತರು ಎತ್ತುಗಾಡಿಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಕೆಲವರು ಅರೆಬೆತ್ತಲೆ ಮೆರವಣಿಗೆ, ಮತ್ತಷ್ಟು ರೈತರು ಉರುಳು ಸೇವೆ ಸಲ್ಲಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ತೀವ್ರತೆ ಹೆಚ್ಚಿದ ವೇಳೆ ರಸ್ತೆ ಮಧ್ಯೆಯೇ ಚಕ್ಕಡಿ (ಒಲೆ) ಇಟ್ಟು ಅಡುಗೆ ತಯಾರಿಸಿ ಅಲ್ಲಿಯೇ ಊಟ ಮಾಡುವ ಮೂಲಕ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು.
ಬರಪೀಡಿತ ಪ್ರದೇಶಗಳ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡ ಯೋಜನೆ ವರ್ಷಗಳಾದರೂ ಪೂರ್ಣಗೊಳ್ಳದಿರುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನೀರಾವರಿ ಸೌಲಭ್ಯವಿಲ್ಲದೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹಲವು ವರ್ಷಗಳಿಂದ ಭರವಸೆಗಳನ್ನಷ್ಟೇ ನೀಡಲಾಗುತ್ತಿದ್ದು, ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ತಿಲ್ಲ ಎಂದು ರೈತರು ಆರೋಪಿಸಿದರು.
“ಯೋಜನೆಯ ಬಾಕಿ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಕಾಲುವೆಗಳಿಗೆ ನೀರು ಹರಿಸಬೇಕು. ರೈತರ ಸಹನೆಯನ್ನು ಸರ್ಕಾರ ಪರೀಕ್ಷಿಸಬಾರದು. ಇನ್ನಷ್ಟು ವಿಳಂಬವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು,” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಿಂದ ವಿಜಯಪುರ–ಧಾರವಾಡ ಮುಖ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳದಲ್ಲೇ ಬಿಗಿ ಬಂದೋಬಸ್ತ್ ಕೈಗೊಂಡು ವಾಹನ ಸಂಚಾರ ಸುಗಮಗೊಳಿಸಿದರು.
ರೈತರ ಹೋರಾಟಕ್ಕೆ ಜಕನೂರು ಮಠದ ಶ್ರೀ ಮಾಧುಲಿಂಗ ಮಹಾರಾಜರು ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ರೈತರ ನ್ಯಾಯಸಮ್ಮತ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಾಗಲಕೋಟೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಹಾದೇವ ನಾಯಕ್, ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಕರಜಗಿ, ಮಾಜಿ ಸೈನಿಕ ಶಿಖರೇಪ್ಪ ಸನ್ನಸಿದ್ದ ಸೇರಿದಂತೆ ವಿವಿಧ ಗ್ರಾಮಗಳ ರೈತರು, ರೈತ ಮುಖಂಡರು, ಗ್ರಾಮಸ್ಥರು ಮತ್ತು ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿದ ಚಿಕ್ಕಲಕಿ ಕ್ರಾಸ್‌ನ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿ–ಮುಂಗಟ್ಟುಗಳನ್ನು ಬಂದ್ ಮಾಡಿ ರೈತರೊಂದಿಗೆ ಹೋರಾಟದಲ್ಲಿ ಪಾಲ್ಗೊಂಡರು. ರೈತರ ನ್ಯಾಯಯುತ ಬೇಡಿಕೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ಚಿಕ್ಕಲಕಿ–ತೊದಲಬಾಗಿ–ಏಕಲಮಟ್ಟಿ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಂಡು ರೈತರ ಜಮೀನುಗಳಿಗೆ ನೀರು ಹರಿಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

