ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವಕರನ್ನು ಯಾರೂ ಕೆಣಕಬಾರದು. ಅವರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಭಾರತ ಯುವಕರ ದೇಶ. ಯುವಕರು ದೇಶದ ಶಕ್ತಿ. ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ. ಅವರು ಮನಸ್ಸು ಮಾಡಿದರೆ ಇತಿಹಾಸ ರಚಿಸಬಲ್ಲರು ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಪ್ರತಿವರ್ಷ 20 ಲಕ್ಷಕ್ಕೂ ಹೆಚ್ಚು ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದು, ಅದಕ್ಕಾಗಿ ಹಗಲು- ರಾತ್ರಿ ಶ್ರಮವಹಿಸಿ ತಯಾರಿ ನಡೆಸುತ್ತಾರೆ. ಆದರೆ, ಪ್ರಶ್ನೆ ಸೋರಿಕೆಯಂಥ ಘಟನೆಗಳು ವಿದ್ಯಾರ್ಥಿಗಳು ಮಾತ್ರವಲ್ಲ ಅವರ ಪೋಷಕರ ಕನಸು ಮತ್ತು ಶ್ರಮವನ್ನೂ ನುಚ್ಚುನೂರು ಮಾಡುತ್ತವೆ. ಈಗ ದೇಶಾದ್ಯಂತ ಯುವಕರು ತಮಗಾಗಿರುವ ಅನ್ಯಾಯದ ವಿರುದ್ಧ ನೋವನ್ನು ಪ್ರತಿಭಟನೆಯ ರೂಪದಲ್ಲಿ ಹೊರ ಹಾಕುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಈ ಪ್ರತಿಭಟನೆಯನ್ನು ನಿರ್ವಹಿಸುತ್ತಿರುವ ರೀತಿ ಖಂಡನೀಯವಾಗಿದೆ. ದೇಶದ ಭವಿಷ್ಯ ಎಂದೇ ಪರಿಗಣಿಸಲಾಗುವ ಯುವಕರು ನಮ್ಮ ಮಕ್ಕಳಿದ್ದಂತೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲರೂ ಯುವಜನತೆಯೊಂದಿಗೆ ಪಕ್ಷಾತೀತವಾಗಿ ಬೆಂಬಲವಾಗಿ ನಿಲ್ಲಬೇಕಾಗಿದೆ. ಯುವಕರ ಭಾವನೆಗಳು ಮತ್ತು ವ್ಯಕ್ತಪಡಿಸುತ್ತಿರುವ ನೋವಿಗೆ ನಾವೆಲ್ಲರೂ ದನಿಗೂಡಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುವಶಕ್ತಿಯನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಅವರ ಆಶೋತ್ತರಗಳಿಗೆ ಸ್ಪಂದಿಸಬೇಕು. ಅವರ ಬೇಡಿಕೆಗಳ ಕಡೆಗೆ ಗಮನ ಹರಿಸಬೇಕು. ಹಳೆಯ ಬೇರು ಮತ್ತು ಹೊಸ ಚಿಗುರು ಪರಸ್ಪರ ಒಂದಾಗಿ ಮುಂದುವರೆದಾಗ ಮಾತ್ರ ದೇಶದಲ್ಲಿ ಸಮೃದ್ಧಿ ಸಾಧ್ಯ. ನಾವೆಲ್ಲರೂ ಅವರೊಂದಿಗೆ ನಿಲ್ಲಬೇಕು. ಅವರ ಬೇಡಿಕೆಗಳಿಗೆ ಕೇಂದ್ರ ಸರಕಾರ ಸ್ಪಂದಿಸಬೇಕು ಎಂದು ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.

