ಲೇಖನ
– ವೀಣಾ ಹೇಮಂತಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಜೀವಂತ ವ್ಯಕ್ತಿಯ ಹೃದಯ ಮತ್ತು ಮೆದುಳುಗಳು ದಿನದ 24 ಗಂಟೆ, ವರ್ಷದ 365 ದಿವಸ ಮತ್ತು ಜೀವಿತದ ಕೊನೆಯವರೆಗೂ ತಮ್ಮ ಕಾರ್ಯವನ್ನು ನಿರ್ವಹಿಸುತ್ತದೆ. ವಿಶ್ರಾಂತಿ ಎಂಬುದು ಈ ಅಂಗಗಳಿಗೆ ಇಲ್ಲ. ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ನಾವು ಒಳ್ಳೆಯ ಆಹಾರ-ವಿಹಾರ, ದೈಹಿಕ ವ್ಯಾಯಾಮ, ಯೋಗ, ಧ್ಯಾನ, ಜಪ-ತಪ ಸತ್ಸಂಗಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಮೆದುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಸಜ್ಜನರ ಸಹವಾಸ ಮಾಡಬೇಕು ಒಳ್ಳೆಯ ಪರಿಸರದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು.
ಇದೀಗ ಪರೀಕ್ಷಾ ಸಮಯದಲ್ಲಿ ನಾವು ಪ್ರತಿಯೊಂದು ಮನೆಗಳಲ್ಲಿ ಕೇಳುವುದು ಒಂದೇ ಮಾತು ಪರೀಕ್ಷೆ ಬಂದಿದೆ, ಚೆನ್ನಾಗಿ ಅಭ್ಯಾಸ ಮಾಡು ಎಂದು. ಹಾಗಾದರೆ ಅಭ್ಯಾಸ ಎಂದರೇನು? ಎಂದು ಪ್ರಶ್ನಿಸಿಕೊಂಡಾಗ ನಾವು ಕಲಿತ ವಿಷಯವನ್ನು ಮನನ ಮಾಡಿಕೊಳ್ಳುವ ಓದುವ ಬರೆಯುವ ಮೂಲಕ ಪುನರಾವರ್ತಿಸುವ ಕಾರ್ಯವನ್ನು ಅಭ್ಯಾಸ ಎಂದು ಹೇಳಬಹುದು.
ಬದುಕಿನಲ್ಲಿ ಬರುವ ಯಾವುದೇ ವಿಷಯಗಳನ್ನು ಅರಿಯಲು ನಮ್ಮಲ್ಲಿ ಅಭ್ಯಾಸದ ಅವಶ್ಯಕತೆ ಇದೆ. ಹೊಸ ವಿಷಯಗಳನ್ನು ಅರಿಯುವ, ಕಲಿಯುವ, ಮನನ ಮಾಡಿಕೊಳ್ಳುವ ಮತ್ತು ಅವುಗಳನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಅಭ್ಯಾಸಕ್ಕೆ ಹೊಸ ಆಯಾಮವನ್ನು ನೀಡಬಹುದು.
ಅಟೆಂಷನ್ ಎಂದರೆ ಏಕಾಗ್ರತೆ ಎಂದರ್ಥ
ಕರೋನ ಪ್ಯಾಂಡಮಿಕ್ ಗೆ ಮುನ್ನ ಪ್ರತಿಯೊಬ್ಬ ವ್ಯಕ್ತಿಯ ಸರಾಸರಿ ಏಕಾಗ್ರತೆ ಏಳು ಸೆಕೆಂಡುಗಳ ಕಾಲ ಇದ್ದು ಪ್ಯಾಂಡೆಮಿಕ್ ನ ನಂತರ ಅದು ಮೂರು ಸೆಕೆಂಡುಗಳಿಗೆ ಇಳಿಮುಖವಾಗಿದೆ. ಅಂದರೆ ಎಲ್ಲ ವಿಷಯಗಳಲ್ಲಿಯೂ ನಮಗೆ ಆಸಕ್ತಿಯು ಕುಂಠಿತವಾಗಿರುವುದು ಸ್ಪಷ್ಟ ಗೋಚರವಾಗುತ್ತಿದೆ.
ಮಹಾನಗರದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿ ‘ಅಯ್ಯೋ ನಂದೂ ಒಂದು ಬಾಳೇ? ಪ್ರತಿ ದಿನ ಎದ್ದು ತಯಾರಾಗಿ ಡಬ್ಬಿ ಹಿಡಿದುಕೊಂಡು ಈ ಹಾಳು ಟ್ರಾಫಿಕ್ ನಲ್ಲಿ ಗುದ್ದಾಡಿಕೊಂಡು ಕೆಲಸಕ್ಕೆ ಹೋಗಬೇಕು ಎಂದು ಗೋಳಾಡಿಕೊಂಡು ಹೇಳುವನು. ತನ್ನ ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಾರದು. ಇದು ತನ್ನ ದೈನಂದಿನ ಕೆಲಸ ತಾನಿದನ್ನು ಮಾಡಲೇಬೇಕು ತನ್ನ ಬದುಕನ್ನು ನಿರ್ವಹಿಸಲು ಈ ಕೆಲಸ ತನಗೆ ಅನಿವಾರ್ಯ ಎಂಬುದನ್ನು ಅರಿತುಕೊಂಡರೆ ಮಾತ್ರ ಗೊಣಗುವುದನ್ನು ಬಿಡುತ್ತಾನೆ. ಅಂತಹ ವ್ಯಕ್ತಿ ಹೀಗೆ ಗೋಳಾಡುವುದನ್ನು ಬಿಡಬೇಕು ಇಲ್ಲವೇ ಕೆಲಸವನ್ನು ಬಿಡಬೇಕು. ಎರಡನೆಯದನ್ನು ಬಿಡಲು ಸಾಧ್ಯವಿಲ್ಲವಾದ್ದರಿಂದ ಮೊದಲನೆಯ ಆಯ್ಕೆ ಮಾತ್ರ ಆತನ ಪಾಲಿಗೆ ಇರುತ್ತದೆ.
ಮನೆಯಲ್ಲಿಯೂ ಅಷ್ಟೇ ಕುಟುಂಬದ ಸದಸ್ಯರಲ್ಲಿ ವಿನಾಕಾರಣ ಏನಾದರೂ ಅಂದು ಆಡುವವರು ಅದರ ಮುಂದಿನ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಅಥವಾ ಹಾಗೆ ಎದುರಿಸಲು ಅಭ್ಯಾಸ ಮಾಡಿಕೊಳ್ಳಲೇಬೇಕು.
ಹೈಸ್ಕೂಲಿನ ಹಂತದಲ್ಲಿರುವ ಮಕ್ಕಳು ತಮ್ಮ ಬದುಕಿನ ಕುರಿತು ಕೆಲ ವಿಷಯಗಳನ್ನು ನಿರ್ದಿಷ್ಟವಾಗಿ ಮಾತನಾಡುತ್ತಾರೆ. ಬದುಕಿನಲ್ಲಿ ಡಾಕ್ಟರ್, ಇಂಜಿನಿಯರ್, ಚಾರ್ಟೆಡ್ ಅಕೌಂಟೆಂಟ್, ಶಿಕ್ಷಕರು, ಬ್ಯಾಂಕ್ ಮ್ಯಾನೇಜರ್ ಹೀಗೆ ಹತ್ತು ಹಲವು ಆಯ್ಕೆಗಳು ಅವರ ಮುಂದೆ ಇದ್ದು ಅದರಲ್ಲಿ ತಮ್ಮಿಷ್ಟದ ವಿಷಯವನ್ನು ಕಲಿಯಲು ಬೇಕಾಗುವ ವಿದ್ಯಾರ್ಹತೆಯ ಕುರಿತು ಅವರಿಗೆ ಸೂಕ್ಷ್ಮ ಅವಗಾಹನೆ ಇರುತ್ತದೆ.. ಇರಬೇಕು ಕೂಡ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅವರು ಇಂದಿನಿಂದಲೇ ತಮ್ಮ ತಯಾರಿಯನ್ನು ಮಾಡಿಕೊಳ್ಳಬೇಕು ಅಂದಾಗ ಮಾತ್ರ ತಮ್ಮ ಬದುಕಿನ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಕೂಡ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಮಕ್ಕಳ ಆಯ್ಕೆಯ ವಿಷಯದ ಕುರಿತು ಅಭ್ಯಾಸ ಮಾಡಿಸಲೇಬೇಕು.
ಯಾವುದೇ ವಿಷಯವನ್ನು ಸತತ 21 ದಿನಗಳ ಕಾಲ ಅಭ್ಯಾಸ ಮಾಡುತ್ತಾ ಹೋದರೆ ಅದು ಅಭ್ಯಾಸವಾಗಿ ಪರಿಣಮಿಸುತ್ತದೆ ಎಂಬ ಮಾತು ಎಲ್ಲರಿಗೂ ಗೊತ್ತು, ಆದರೂ ಕೂಡ ಬಹಳಷ್ಟು ಜನ ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬಂತೆ ವರ್ಷವಿಡೀ ಹಾಳು ಹರಟೆ,, ಓಡಾಟ ಮುಂತಾದ ವಿಷಯಗಳಲ್ಲಿ ಕಾಲ ಕಳೆದು ಪರೀಕ್ಷೆಯ ಸಮಯದಲ್ಲಿ ಗಡಿಬಿಡಿಯಿಂದ ಎಲ್ಲವನ್ನು ಓದಿ ಆರಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಮತ್ತೆ ಕೆಲವರು ಉರು ಹೊಡೆಯುತ್ತಾರೆ.. ಇವೆರಡೂ ತಪ್ಪು.
ಶಾಲೆಯ ಆರಂಭದ ದಿನಗಳಿಂದಲೂ ಪ್ರತಿ ಪಾಠದ ನಂತರ ಅವುಗಳನ್ನು ಓದಿ ಬರೆದು ಪುನರ್ ಮನನ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಒಂದೊಂದಾಗಿ ಬೇಡವೆನಿಸಿದ ವಿಷಯಗಳನ್ನು ದೂರ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಉದಾಹರಣೆಗೆ ಪ್ಲಾಸ್ಟಿಕ್ ಬಟ್ಟಲು ಚಮಚ ತಟ್ಟೆಗಳನ್ನು ಇನ್ನು ಮುಂದೆ ಬಳಸಬಾರದು ಎಂದುಕೊಳ್ಳುವ ವ್ಯಕ್ತಿ ಮನೆಯಲ್ಲೇ ಇರಲಿ, ಪ್ರವಾಸದಲ್ಲೇ ಇರಲಿ, ಸಮಾರಂಭಗಳಿಗೆ ಹೋಗಿರಲಿ ಅಲ್ಲಿ ಕೊಡುವ ಬಟ್ಟಲಿನಲ್ಲಿ ಆಹಾರ ಪದಾರ್ಥಗಳನ್ನು ಬಳಸುವುದನ್ನು ಬಿಟ್ಟಾಗ, ಪ್ಲಾಸ್ಟಿಕ್ ಲೋಟದಲ್ಲಿ ನೀರನ್ನು ಕುಡಿಯುವುದನ್ನು ಬಿಟ್ಟಾಗ ಅದು ಆತನಿಗೆ ಅಭ್ಯಾಸವಾಗಿಯೇ ಹೋಗುತ್ತದೆ. ಮುಂದೆ ಇದು ಆತನ ರೂಢಿಯಲ್ಲಿ ಉಳಿದು ನಿವಾಸದಲ್ಲಿಯೇ ಆಗಲಿ ಪ್ರವಾಸದಲ್ಲಿಯೇ ಇರಲಿ ಆತ ತನ್ನ ಅಭ್ಯಾಸಕ್ಕೆ ಬದ್ಧನಾಗಿ ಇರುತ್ತಾನೆ.
ನಮ್ಮ ದೈನಂದಿನ ಬದುಕಿನಲ್ಲಿಯೂ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು.
ಪ್ರತಿದಿನ ಎರಡುವರೆಯಿಂದ 3 ಲೀಟರ್ ನೀರು ಕುಡಿಯಬೇಕು ಎಂಬುದು ಗೊತ್ತಿದ್ದರೂ ತೊಂದರೆಯಾದಾಗ ಒಂದೆರಡು ದಿನ ಕುಡಿದು ಮತ್ತೆ ಬಿಟ್ಟುಬಿಡುವರು.. ಇದು ತಪ್ಪು ಎಂದು ಗೊತ್ತಿದ್ದೂ ಕೂಡ ತಪ್ಪು ಮಾಡುವ ಬೆಪ್ಪತನ ನಮ್ಮದಾಗಬಾರದು.
ಕಡ್ಡಾಯವಾಗಿ ದಿನಕ್ಕೆ ಕನಿಷ್ಠ ಎರಡೂವರೆ ಲೀಟರ್ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಸಮಯಕ್ಕೆ ಸರಿಯಾಗಿ ಬಿಸಿಯಾದ ತಾಜಾ ಆಹಾರವನ್ನು ತಯಾರಿಸಿ ಸೇವಿಸಬೇಕು. ಇದು ಕೂಡ ಒಂದು ಅಭ್ಯಾಸವೇ. ಆಯಾ ಸಮಯಕ್ಕೆ ಸರಿಯಾಗಿ ಕುಟುಂಬದವರ ಜೊತೆಗೆ ಊಟ ಮಾಡುವುದರ ಮೂಲಕ ಮಾನಸಿಕ ಸಂತೃಪ್ತಿಯ ಜೊತೆ ಜೊತೆಗೆ ದೈಹಿಕ ಶಕ್ತಿಗೆ ಅವಶ್ಯಕವಾದ ಆಹಾರ ನಮ್ಮ ಮೈಮನಗಳಲ್ಲಿ ಹುಮ್ಮಸ್ಸನ್ನು, ಶಕ್ತಿಯನ್ನು ತುಂಬುತ್ತದೆ.
ಮನೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯಬೇಕು. ವಿವಿಧ ವಾರ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಪೇಪರ್ ಗಳು ಮನೆಗೆ ಬರುತ್ತಿದ್ದರೆ ಆಸಕ್ತಿ ಇಲ್ಲದಿದ್ದರೂ ಒಂದೊಮ್ಮೆ ಅದರ ಪುಟ ಹೊರಳಿಸುವ, ಯಾವುದಾದರೂ ಕಥೆಯನ್ನು ಇಲ್ಲವೇ ವಿಷಯವನ್ನು ಓದುವ ಮನ ಉಂಟಾಗುತ್ತದೆ. ಆದ್ದರಿಂದ ಪುಸ್ತಕಗಳನ್ನು ಮನೆಯಲ್ಲಿ ತರಿಸಿ ಅವುಗಳನ್ನು ಪಾಲಕರು ತಾವೂ ಓದಿ ಮಕ್ಕಳಲ್ಲೂ ಓದುವ ಹವ್ಯಾಸವನ್ನು ರೂಪಿಸಬೇಕು.
ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಯೋಗ, ವ್ಯಾಯಾಮ, ನಡಿಗೆಗಳನ್ನು ದೈನಂದಿನ ಜೀವನದ ಭಾಗವನ್ನಾಗಿಸಿಕೊಳ್ಳಬೇಕು. ಹೊಸ ವರ್ಷದ
ಮೊದಲ ಒಂದೆರಡು ವಾರ ವಾಕಿಂಗ್, ಯೋಗ, ವ್ಯಾಯಾಮಗಳನ್ನು ಮಾಡಿ ನಂತರ ಬಿಟ್ಟುಬಿಡುವುದು ಅಭ್ಯಾಸವಲ್ಲ.
ಬದುಕಿನುದ್ದಕ್ಕೂ ಉತ್ತಮ ಆಹಾರ, ವಿಹಾರ ವ್ಯಾಯಾಮ ನಡಿಗೆಗಳಿಗೆ ಆದ್ಯತೆಯನ್ನು ನೀಡಿ ಅತ್ಯುತ್ತಮ ಅಭ್ಯಾಸಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಒಳ್ಳೆಯ ಜೀವನವನ್ನು
ನಮ್ಮದಾಗಿಸಿಕೊಳ್ಳಬೇಕು.


