ಲೇಖನ
– ಶೀತಲ್ ಹೆಗಡೆ
ನಿರ್ವಾಹಕಿ
”ನಮ್ಮ ಕಥಾ ಅರಮನೆ”
ಉದಯರಶ್ಮಿ ದಿನಪತ್ರಿಕೆ
ಉತ್ತಮ ವ್ಯಕ್ತಿಯೆಂದರೆ ಎತ್ತರಕ್ಕೇರುವುದು ಅಲ್ಲ, ಎತ್ತರಕ್ಕೇರಿದ ನಂತರವೂ ವಿನಯದಿಂದ ಬಾಗುವುದು. ಮಾತಿಗಿಂತ ನಡತೆಯೇ ಅವರ ಪರಿಚಯ, ಮಾನವೀಯತೆಯೇ ಅವರ ನಿಜವಾದ ಆಭರಣ.
ಕಾಕತಾಳೀಯವೋ, ಕನ್ನಡ ಭುವನೇಶ್ವರಿಯ ಸಂಕೇತವೋ ತಿಳಿಯದು. ಕನ್ನಡ ರಾಜ್ಯೋತ್ಸವದ ದಿನವೇ (ನವೆಂಬರ್ 1) ಜನಿಸಿದ ಅಪ್ಪಟ ಕನ್ನಡಾಭಿಮಾನಿ. ವೃತ್ತಿಯಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸಿ, ಇಂದು ಉನ್ನತ ಹುದ್ದೆಯಲ್ಲಿದ್ದರೂ ಸಮಯದ ಅಭಾವದ ನಡುವೆಯೂ ಕನ್ನಡಕ್ಕಾಗಿ ತನ್ನ ತನು-ಮನವನ್ನು ಮುಡಿಪಾಗಿಟ್ಟಿರುವ ಶ್ರಮಿಕ ವ್ಯಕ್ತಿತ್ವ, ನಮ್ಮ ಕಥಾ ಅರಮನೆಯ ಸಂಚಾಲಕರಾದ ಡಾ.ರಾಜಶೇಖರ ನಾಗೂರ ಅವರದು.
ಪ್ರವೃತ್ತಿಯಲ್ಲಿ ಅವರು ಕೈಯಾಡಿಸಿದ ವಿಷಯಗಳು ಒಂದೆರಡಲ್ಲ. ಯಾವುದೇ ವಿಷಯವಾಗಿರಲಿ, ಅದರ ಬಗ್ಗೆ ನಿರರ್ಗಳವಾಗಿ, ಮನಮುಟ್ಟುವ ರೀತಿಯಲ್ಲಿ ಗಂಟೆಗಟ್ಟಲೆ ಮಾತನಾಡಬಲ್ಲ ಅಪರೂಪದ ವಾಗ್ಮಿ. ಎಲ್ಲರನ್ನೂ ಸಮಾನವಾಗಿ ಕಾಣುವ ಸಮತೋಲನದ ವ್ಯಕ್ತಿತ್ವ ಅವರದು.
‘ಒಲವಧಾರೆ ❤️’ ಎಂಬ ಅಂಕಣದ ಮೂಲಕ ಓದುಗರ ಮನಸೂರೆಗೊಳ್ಳುವ ಚುಟುಕುಗಳು, ಕವಿತೆಗಳು ಮತ್ತು ಭಾವಪೂರ್ಣ ಬರಹಗಳನ್ನು ಯಾವುದೇ ಆಡಂಬರವಿಲ್ಲದೆ, ಕಠಿಣ ಪದಗಳ ಬಳಕೆಯಿಲ್ಲದೆ, ಸಾಮಾನ್ಯರ ಮನಸ್ಸಿಗೆ ಹತ್ತಿರವಾಗುವಂತೆ ಅಭಿವ್ಯಕ್ತಗೊಳಿಸುವ ನಿರೂಪಕರು ಅವರು.
‘ಧ್ವನಿಧಾರೆ’ ಮೂಲಕ ಹೊಸಹೊಸ ವಿಚಾರಗಳನ್ನು ಸರಳವಾಗಿ, ಸ್ಪಷ್ಟವಾಗಿ ಮನದಟ್ಟು ಮಾಡುವ ಸಲಹೆಗಾರರು. ‘ಸಿಂಚನ’ ಕಾರ್ಯಕ್ರಮದ ಮೂಲಕ ವಾರಕ್ಕೊಂದು ನೀತಿಕಥೆಯನ್ನು ತಮ್ಮ ಸೊಗಸಾದ ಧ್ವನಿಯಲ್ಲಿ ಹೇಳುತ್ತಾ ಸಾವಿರಾರು ಜನರ ಮನದಲ್ಲಿ ಅಳಿಯದ ಛಾಪು ಮೂಡಿಸಿದ ಮಾಂತ್ರಿಕ. ತಮ್ಮದೇ ಆದ ವಿಶಿಷ್ಟ ಧ್ವನಿಯಿಂದ ಕೇಳುಗರ ಮನಸ್ಸಿಗೆ ನೆಮ್ಮದಿ, ಧೈರ್ಯ ಮತ್ತು ಚೈತನ್ಯ ತುಂಬುವ ಚೇತನ ನಮ್ಮ ಡಾ.ರಾಜಶೇಖರ ನಾಗೂರ.
ನಮ್ಮ ಕಥಾ ಅರಮನೆಯಲ್ಲಿ ನಾಲ್ಕು-ಐದು ವರ್ಷಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಕಳೆದ ಎರಡು ವರ್ಷಗಳಿಂದ ಹೊಸ ತಂಡದೊಂದಿಗೆ ಹೊಸ ಉತ್ಸಾಹವನ್ನು ತುಂಬಿದ್ದಾರೆ. ಅವರು ಪರಿಚಯಿಸಿದ ‘ಕೊಲ್ಯಾಬ್’ (ತಾವು ನೀಡುವ ಒಲವಿನ ಸಾಲುಗಳಿಗೆ ಪ್ರತಿಯಾಗಿ ಸಂಭಾಷಣೆಯ ರೂಪದಲ್ಲಿ ಸದಸ್ಯರು ಬರೆಯುವ ವಿನೂತನ ಪ್ರಯೋಗ) ಇಂದು ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಬುಧವಾರಕ್ಕಾಗಿ ಸದಸ್ಯರು ಕಾತರದಿಂದ ಕಾಯುವುದು ಇದಕ್ಕೆ ಸಾಕ್ಷಿ.
ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಕನ್ನಡ ರಾಜ್ಯೋತ್ಸವವನ್ನು ಕೇವಲ ನವೆಂಬರ್ 1 ಕ್ಕೆ ಸೀಮಿತಗೊಳಿಸದೆ, ಇಡೀ ತಿಂಗಳು ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚುಟುಕುಗಳನ್ನು ನೀಡಿ, ಸದಸ್ಯರಿಂದ ಲಕ್ಷಾಂತರ ಬರಹಗಳನ್ನು ಬರೆಯಿಸಿ ತಾಯಿ ಭುವನೇಶ್ವರಿಗೆ ನುಡಿನಮನ ಸಲ್ಲಿಸುವ ಮಹತ್ತರ ಕಾರ್ಯವನ್ನು ಮಾಡಿದ್ದಾರೆ. ನಿಜಕ್ಕೂ ಅವರು ಸರಸ್ವತಿಯ ವರಪುತ್ರರು.

ಜನವರಿ 18, 2026 ರಂದು ನಡೆದ ನಮ್ಮ ಕಥಾ ಅರಮನೆಯ ಅದ್ಭುತವಾದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಕಾರಣರದವರು ಮತ್ತು ಅಂದಿನ ಕಾರ್ಯಕ್ರಮದ ಗಣ್ಯರ ಸಮ್ಮುಖದಲ್ಲಿ ಅವರ ಮೂರು ಕೃತಿಗಳ ಅನಾವರಣ ನಡೆಯಿತು.
ಕಾರ್ಯಕ್ರಮದ ಗಣ್ಯರು:
- ಶ್ರೀ ಟಿ. ಎನ್. ಸೀತಾರಾಮ್ – ಖ್ಯಾತ ಧಾರಾವಾಹಿ ಹಾಗೂ ಚಲನಚಿತ್ರ ನಿರ್ದೇಶಕರು
- ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ – ಖ್ಯಾತ ಹೃದಯ ತಜ್ಞರು ಹಾಗೂ ಸಾಹಿತಿ
- ಶ್ರೀ ವೀರಕಪುತ್ರ ಶ್ರೀನಿವಾಸ – ಪುಸ್ತಕ ಸಂತೆಯ ಹರಿಕಾರ
- ಶ್ರೀ ಗೌರೀಶ್ ಅಕ್ಕಿ – ಖ್ಯಾತ ನಿರೂಪಕರು ಹಾಗೂ ನಟರು
- ಶ್ರೀ ರವಿ ಆರ್. ಗರಣಿ – ಖ್ಯಾತ ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು
- ಶ್ರೀ ಇಂದುಶೇಖರ್ ಮಣೂರ – ಉದಯರಶ್ಮಿ ದಿನ ಪತ್ರಿಕೆಯ ಸಂಪಾದಕರು
- ಶ್ರೀ Rj ಪ್ರದೀಪ್ 92.7 FM ನ ನೆನಪಿನ ನಾವಿಕ ರೇಡಿಯೋ ನಿರೂಪಕರು.
- ಶ್ರೀ ಗುಡ್ಡಣ್ಣ – ನಮ್ಮ ಕಥಾ ಅರಮನೆ ಸಂಸ್ಥಾಪಕರು
ಅವರ ಸಮ್ಮುಖದಲ್ಲಿ ಬಿಡುಗಡೆಯಾದ ಡಾ. ರಾಜಶೇಖರ ರವರ ಕೃತಿಗಳು:
- ಒಲವಧಾರೆ
- ಮನಮಂಥನ
- ಸ್ಪಾರ್ಕ್ – 1
ಈ ಮೂರು ಪುಸ್ತಕಗಳೂ ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ವಿಶೇಷವಾಗಿ ‘ಸ್ಪಾರ್ಕ್’ ಕೃತಿಯನ್ನು ಓದಿದ ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಅದರಲ್ಲಿರುವ ಬರಹಗಳು ನೊಂದ ಮನಗಳಿಗೆ ಸಾಂತ್ವನ, ಬದುಕಿಗೆ ಹೊಸ ಚೈತನ್ಯ ಮತ್ತು ಹಲವರಿಗೆ ಮಾರ್ಗದರ್ಶನ ನೀಡುವ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಕನ್ನಡವೇ ಹಸಿರು, ಕನ್ನಡವೇ ಉಸಿರು” ಎಂಬ ನಂಬಿಕೆಯಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಜಶೇಖರ ನಾಗೂರ ಅವರ ಜನ್ಮದಿನವೂ ನವೆಂಬರ್ 1ರಂದು ಎಂಬುದು ಕನ್ನಡ ಭುವನೇಶ್ವರಿಯ ಸಂಕೇತವೇನೋ ಎನ್ನುವ ಭಾವ ಮೂಡಿಸುತ್ತದೆ. “ಆಡು ಮುಟ್ಟದ ಸೊಪ್ಪಿಲ್ಲ, ಡಾ.ರಾಜಶೇಖರ ನಾಗೂರ ಅವರು ಬರೆಯದ ವಿಷಯವಿಲ್ಲ” ಎಂಬ ಮಾತು ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ.
ನಮ್ಮ ಕಥಾ ಅರಮನೆಯ ಸಂಚಾಲಕರಾಗಿ ತಮ್ಮ ಬರಹಗಳ ಮೂಲಕ ಸದಸ್ಯರ ಮನ ಗೆದ್ದಿರುವ ಅವರು, ನಮ್ಮಂತಹ ಹೊಸ ಬರಹಗಾರರಿಗೆ ಮಾರ್ಗದರ್ಶನ ನೀಡುವ ಮಾರ್ಗದರ್ಶಕರು. ಎಲ್ಲರನ್ನೂ ಸಮಾನವಾಗಿ ಕಾಣುವ ಸಾರಥಿ. ಒಟ್ಟಾರೆಯಾಗಿ ಹೇಳುವುದಾದರೆ ‘ನಮ್ಮ ಕಥಾ ಅರಮನೆಯ ನಾಡಿಮಿಡಿತ’.
ಡಾ. ರಾಜಶೇಖರ ನಾಗೂರ ಅವರಿಗೆ ಅವರು ಕಂಡಿರುವ ಎಲ್ಲ ಕನಸುಗಳು ನನಸಾಗಲಿ. ದೇವರು ಅವರಿಗೆ ಉತ್ತಮ ಆರೋಗ್ಯ, ಆಯುರಾರೋಗ್ಯ ಮತ್ತು ಇನ್ನಷ್ಟು ಕನ್ನಡಸೇವೆಯನ್ನು ಮಾಡುವ ಶಕ್ತಿ ನೀಡಲಿ ಎಂದು ನಮ್ಮ ಕಥಾ ಅರಮನೆಯ ಸಮಸ್ತ ಬಳಗದ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.


