ಆಲಮಟ್ಟಿ: ಆಲಮಟ್ಟಿ ಜಲಾಶಯ 519.60ಮೀ ನಿಂದ 524.256 ಮೀ ಎತ್ತರದಿಂದ ನೀರಾವರಿಗೊಳ್ಳುವ ವಿಜಯಪುರ ಜಿಲ್ಲೆಯ ಪಾಲಿನ ನೀರನ್ನು ಪಡೆಯಲು ಮತ್ತು ನೀರಾವರಿ ಯೋಜನೆಗಳ ನೀರಿನ ಮರುಹಂಚಿಕೆಗಾಗಿ ಜನಜಾಗೃತಿಯ ಜತೆಗೆ ಧರಣಿ ಸತ್ಯಾಗ್ರಹ ಶೀಘ್ರ ಆರಂಭಿಸಲಾಗುವುದು ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಹೇಳಿದರು.
ಆಲಮಟ್ಟಿಯಲ್ಲಿ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯುಕೆಪಿ ಮೂರನೇ ಹಂತದ ನೀರಾವರಿ ಯೋಜನೆಗಳ ಕಾಲುವೆಯ ಕಾಮಗಾರಿಗಳು ಜಿಲ್ಲೆಯಲ್ಲಿ ಪೂರ್ಣಗೊಂಡಿವೆ. ಆದರೆ ಅದಕ್ಕೆ ನೀರಿನ ಭರವಸೆಯಿಲ್ಲ. ಕಾನೂನಾತ್ಮಕ ಸಮಸ್ಯೆಗಳು ಸಾಕಷ್ಟಿವೆ.
ತ್ಯಾಗ ಮಾಡಿದ ವಿಜಯಪುರ ಜಿಲ್ಲೆಗಿಂತಲೂ ನಾರಾಯಣಪುರ ಅಚ್ಚುಕಟ್ಟು ಪ್ರದೇಶದಲ್ಲಿ ಅತಿ ಹೆಚ್ಚು ನೀರಾವರಿಯಾಗಿದೆ. ಈ ತಾರತಮ್ಯ ನಿವಾರಿಸಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿನ ಪ್ರಸ್ತುತ ಅನುಷ್ಠಾನಗೊಂಡಿರುವ ಯೋಜನೆಗಳನ್ನು ಪರಿಗಣಿಸಿ ಪ್ರತಿ ಯೋಜನೆಗೂ ನೀರಿನ ಮರುಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ನವ್ಹಂಬರ್ ತಿಂಗಳಲ್ಲಿ ಆಲಮಟ್ಟಿಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು, ಮತ್ತೊಂದೆಡೆ ಜಿಲ್ಲೆಯಾದ್ಯಂತ ಸಂಚರಿಸಿ ನೀರಾವರಿಗಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗ್ಯಾನಪ್ಪ ಮಾದರ, ಗುರುರಾಜ ವಡ್ಡರ, ತಿರುಪತಿ ಬಂಡಿವಡ್ಡರ ಇದ್ದರು.
Related Posts
Add A Comment