ನಿತ್ಯ ೬ ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಸಚಿವ ಎಂ.ಬಿ.ಪಾಟೀಲ ಸೂಚನೆ
ವಿಜಯಪುರ: ರಾಜ್ಯದಲ್ಲಿ ಈ ಮೊದಲಿಗಿಂತ ೬ ಸಾವಿರ ಮೆಘಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಆದಾಗ್ಯೂ ನೀರಾವರಿ ಪಂಪಸೆಟ್‌ಗಳಿಗೆ ೪ ಬ್ಯಾಚ್‌ಗಳಲ್ಲಿ ಆರು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿದ್ಯುತ್ ಪೂರೈಕೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯುತ್ ಅಭಾವ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಖುದ್ದಾಗಿ ಪರಿಶೀಲಿಸಿ ನಿರ್ದೇಶನ ನೀಡಿರುವುದರಿಂದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಬೇಡಿಕೆಯಂತೆ ರಾತ್ರಿ ೨ ಬ್ಯಾಚ್ ಹಾಗೂ ಹಗಲು ೨ ಬ್ಯಾಚ್ ಸೇರಿದಂತೆ ೫ ಗಂಟೆಗಳ ಬದಲಿಗೆ ೬ ಗಂಟೆಗಳ ಕಾಲ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಸಬೇಕು. ಹಾಗೂ ತೋಟದ ಮನೆಗಳ ಗೃಹ ಬಳಕೆಗಾಗಿ ಸಂಜೆ ೬ ರಿಂದ ೧೦ ಗಂಟೆವರೆಗೆ ವಿದ್ಯುತ್ ಪೂರೈಸುವಂತೆ ಸೂಚಿಸಿದ ಅವರು, ಗೃಹಬಳಕೆಗಾಗಿ ವಿದ್ಯುತ್ ಪೂರೈಸುವ ಅವಧಿಯಲ್ಲಿ ಟ್ರಾನ್ಸ್ಪಾರ್ಮರ್ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸಲು ಈ ಸಮಯದಲ್ಲಿ ನೀರಾವರಿ ಪಂಪಸೆಟ್‌ಗಳನ್ನು ಚಾಲು ಮಾಡದೇ ರೈತರು ಸಹಕರಿಸುವಂತೆ ಅವರು ಮನವಿ ಮಾಡಿಕೊಂಡರು.
ಜಿಲ್ಲಾವಾರು ವಿದ್ಯುತ್ ಅಭಾವವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕಬ್ಬು ನುರಿಸುವ ಹಂಗಾಮು ಆರಂಭದಿಂದ ಜಿಲ್ಲೆಯಲ್ಲಿ ೧೭೪ ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಿ ದೊರೆಯಲಿರುವುದರಿಂದ ವಿದ್ಯುತ್ ಬೇಡಿಕೆ ಕಡಿಮೆಯಾಗಿ ಈ ವಿದ್ಯುತ್ ಸದ್ಭಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ವಿದ್ಯುತ್ ಅಭಾವವಾಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧ ವರ್ಗದ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವ ಕುರಿತು ಮೇಲ್ವಿಚಾರಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ವಿದ್ಯುತ್ ಪೂರೈಕೆ ಮೇಲ್ವಿಚಾರಣೆ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯರ್ನಿಹಣಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸದಸ್ಯರಾಗಿ ಹಾಗೂ ಕೆಪಿಟಿಸಿಎಲ್- ವಿದ್ಯುತ್ ಸರಬರಾಜು ಕಂಪನಿಗಳಿಂದ ನೇಮಿಸಲ್ಪ ಜಿಲ್ಲಾ ನೋಡಲ್ ಅಧಿಕಾರಿ (ಮುಖ್ಯ ಅಭಿಯಂತರ)ಗಳು ಕಾರ್ಯನಿರ್ವಹಿಸಲಿದ್ದು, ಈ ಸಮಿತಿ ಜಿಲ್ಲೆಯಲ್ಲಿ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿರುವ ಕುರಿತು ಮೇಲ್ವಿಚಾರಣೆ ನಡೆಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಜಿ.ಕೆ.ಗೊಟ್ಯಾಳ, ಕೆಪಿಟಿಸಿಎಲ್ ಮುಖ್ಯ ಇಂಜಿನೀಯರ್ ಕಾಶೀನಾಥ ಹಿರೇಮಠ ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.