ಸರ್ಕಾರಿ ಶಾಲೆಯಂಗಳಕ್ಕೆ ಹಸಿರುಹೊದಿಕೆ ತೊಡಿಸಿದ ಶಿಕ್ಷಕ | ಬೇಡರ ಬೂದಿಹಾಳ ಶಾಲೆಯ ಮುಖ್ಯಗುರು ಕಾರ್ಯಕ್ಕೆ ಗ್ರಾಮಸ್ಥರ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ: ಕೃಷ್ಣಾ ಪೂಜಾರಿ
ಬದಾಮಿ: ಸರ್ಕಾರಿ ಶಾಲೆಯೆಂದರೆ ಹೀಗಳೆಯುವವರೇ ಹೆಚ್ಚು ಜನ. ಹೀಗಿರುವಾಗ ಕೇವಲ ಎರಡೂವರೆ ವರ್ಷದ ಹಿಂದೆ ಬೇರೆ ಶಾಲೆಯಿಂದ ವರ್ಗಾವಣೆಗೊಂಡು ಬಂದ ಶಿಕ್ವಕರೊಬ್ಬರು ತಾವಿರುವ ಶಾಲೆಯ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿ ಪರಿಸರ ಕಾಳಜಿ ಮೆರೆದು ಎಲ್ಲರೂ ತಲೆಎತ್ತಿ ನೋಡುವಂತೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೇಡರ ಬೂದೀಹಾಳ ಶಾಲೆಯ ಮುಖ್ಯ ಗುರು ವೈ.ಎನ್.ಅಮರಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಶಿಕ್ಷಕರು.
ಗ್ರಾಮದ ಎಲ್ಲ ಗುರು ಹಿರಿಯರ ಹಾಗೂ ಎಸ್.ಡಿ.ಎಮ್.ಸಿ ಯವರ ವಿಶ್ವಾಸ ಗಳಿಸಿ, ಸರಕಾರದಿಂದ ಬರುವ ಅನುದಾನವಲ್ಲದೇ ತಮ್ಮ ಸಹೋದ್ಯೋಗಿ ಶಿಕ್ಷಕರ ಸಹಾಯ ಪಡೆದು ತಮ್ಮ ಸ್ವಂತ ಹಣವನ್ನು ವಿನಿಯೋಗಿಸಿ ಇಡೀ ಶಾಲೆಯ ಆವರಣವನ್ನು ಒಂದು ಸುಂದರ ತೋಟವನ್ನಾಗಿಸಿ, ಹಸಿರು ಹೊದಿಕೆ ತೊಡಿಸುವಲ್ಲಿ ಸಫಲರಾಗಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಕೇವಲ ಪಾಠ ಮಾಡಿದರೆ ಸಾಲದು, ಅವರಿಗೆ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುವುದೂ ಸಹ ಶಿಕ್ಷಕರ ಮತ್ತು ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿ. ಅದನ್ನು ಮುಖ್ಯ ಗುರು ವೈ.ಎನ್.ಅಮರಿ ಅವರು ಸಮರ್ಥವಾಗಿ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ.
ಎಲ್ಲ ಶಾಲೆಗಳಲ್ಲೂ
ಮುಖ್ಯ ಗುರು ಅಮರಿ ಹಾಗೂ ಎಲ್ಲ ಸಹೋದ್ಯೋಗಿ ಶಿಕ್ಷಕರಂತೆ ಸಮಾನ ಅಭಿರುಚಿ, ಮನಸ್ಕರಿದ್ದಲ್ಲಿ ಏನೆಲ್ಲಾ ಸಾಧ್ಯ ಎಂಬುದಕ್ಕೆ ಈ ಶಾಲೆ ನಿದರ್ಶನವಾಗಿದೆ.

ಮಕ್ಕಳಲ್ಲಿ ನಿತ್ಯ ಆನಂದದ ಅನುಭೂತಿ
ಮುಖ್ಯ ಗುರು ವೈ.ಎನ್.ಅಮರಿ ಅವರು ಈ ಶಾಲೆಗೆ ಬಂದ ಮೇಲೆ ಶಾಲಾ ಕೊಠಡಿಗಳ ಕೊರತೆ ಮನಗಂಡು ಅದಕ್ಕೆ ಆದ್ಯತೆ ನೀಡಿದರು. ಶಾಲಾ ಕೊಠಡಿಗಳ ಗೋಡೆಗಳ ಮೇಲೆ ಮಕ್ಕಳಿಗೆ ಉಪಯುಕ್ತ ಬರಹ, ಹಾಗೂ ಚಿಕ್ಕದಾದ ಅಂಗಳದಲ್ಲಿ ಜವಾರಿ ಬಾಳೆಗಿಡಗನ್ನು ನೆಟ್ಟು ಅವುಗಳಿಗೆ ನೈಸರ್ಗಿಕವಾಗಿ ಲಭ್ಯವಾಗುವ ಸಾವಯವ ಗೊಬ್ಬರ ಹಾಕಿ ಬೆಳೆಸಿ ಮಕ್ಕಳಲ್ಲಿ ಪರಿಸರದ ಬಗ್ಗೆ ಒಲವು ಮೂಡಿಸಿದ್ದಾರೆ. ದಾಸವಾಳ, ಮಲ್ಲಿಗೆ ಇತ್ಯಾದಿ ಹೂವಿನ ಗಿಡಗಳು, ಬಳ್ಳಿಗಳನ್ನು ಮಕ್ಕಳು ನಿತ್ಯ ಸ್ಪರ್ಷಿಸಿ ಆನಂದದ ಅನುಭೂತಿ ಪಡೆಯುತ್ತಾರೆ.

“ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು, ಹಸಿರು ಹೊದಿಕೆ ಹೆಚ್ಚಿಸಿ, ಪರಿಸರದ ಉಳಿವಿಗಾಗಿ ಕೈಜೋಡಿಸಬೇಕು. ಇದರಿಂದ ಪರಿಸರ ಸ್ವಚ್ಚವಾಗಿ ಬದುಕಲು ಉತ್ತಮ ಗಾಳಿ, ಮಳೆ, ಹಣ್ಣು, ನೆರಳು ಸಿಗುತ್ತದೆ. ನನ್ನೀ ಕಾರ್ಯವನ್ನು ಮಕ್ಕಳು ಆಸಕ್ತಿಯಿಂದ ಗಮನಿಸುತ್ತಾರೆ. ಅವುಗಳ ಪೋಷಣೆಗೆ ಅವರು ಮುಂದಾಗುವುದನ್ನು ಕಂಡಾಗ ನನ್ನ ಶ್ರಮ ಸಾರ್ಥಕ ಎಂಬ ಭಾವ ಮೂಡುತ್ತದೆ.”
– ವೈ.ಎನ್.ಅಮರಿ
ಮುಖ್ಯಗುರು, ಬೇಡರ ಬೂದಿಹಾಳ ಸರ್ಕಾರಿ ಶಾಲೆ

“ಬಾದಾಮಿ ತಾಲೂಕಿನ ಪುಟ್ಟ ಗ್ರಾಮದಲ್ಲಿ ಸರಕಾರಿ ಶಾಲೆಯನ್ನು ಬೆಟ್ಟದಂತೆ ಬೆಳೆಸಿದ ಹೆಗ್ಗಳಿಕೆ ಆ ಶಾಲೆಯ ಮುಖ್ಯ ಗುರುಗಳಾದ ವೈ.ಎನ್.ಅಮರಿ ಇವರಿಗೆ ಸಲ್ಲಬೇಕು. ಭವಿಷ್ಯದ ಪ್ರಜೆಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಇವರ ದೂರದೃಷ್ಟಿ ಅನುಕರಣೀಯ. “
– ಕೃಷ್ಣಪ್ಪ ಪೂಜಾರಿ (ಸಿಂದಗಿ)
ನಿವೃತ್ತ ಶಿಕ್ಷಕರು, ಬದಾಮಿ

