ಕೋರವಾರದಿಂದ ದೇವರಹಿಪ್ಪರಗಿವರೆಗೆ ರೈತಸಂಘದ ಪದಾಧಿಕಾರಿಗಳಿಂದ ಪಾದಯಾತ್ರೆ
ದೇವರಹಿಪ್ಪರಗಿ: ರೈತರ ಸಂಪೂರ್ಣ ಸಾಲಮನ್ನಾ , ಬರಗಾಲ ನಿಮಿತ್ಯ ತುರ್ತು ಪರಿಹಾರ, ಸೇರಿದಂತೆ ೧೧ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಕೋರವಾರ ಗ್ರಾಮದಿಂದ ದೇವರಹಿಪ್ಪರಗಿವರೆಗೆ ಸುಮಾರು ೬ ಗಂಟೆಗಳ ಕಾಲ ಪಾದಯಾತ್ರೆ ಕೈಗೊಂಡು ನಂತರ ಅಂಬೇಡ್ಕರ್ ವೃತ್ತದಲ್ಲಿ ಒಂದು ಗಂಟೆಗಳ ಕಾಲ ಧರಣಿ ಕುಳಿತು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಕೋರವಾರೇಶ ಗ್ರಾಮದಲ್ಲಿ ಸೇರಿದ ರೈತರು ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಈರಪ್ಪ ಕುಳೇಕುಮಟಗಿ, ಶಿವಾನಂದ ಹಿರೇಮಠ, ಸಂಗಮೇಶ ಹುಣಸಗಿ, ಚೌಕಿಮಠದ ಕಾಶೀಲಿಂಗಶ್ರೀ ನೇತೃತ್ವದಲ್ಲಿ ಜಾಲವಾದ, ಮಣೂರ, ದೇವೂರ ಗ್ರಾಮಗಳ ಮೂಲಕ ಒಟ್ಟು ೨೦ ಕಿ.ಮೀ ಪಾದಯಾತ್ರೆ ನಡೆಸಿ, ಅಂಬೇಡ್ಕರ್ ವೃತ್ತ ತಲುಪಿ ಧರಣಿ ಕುಳಿತರು. ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಸದಯ್ಯನಮಠದ ವೀರಗಂಗಾಧರಶ್ರೀ, ಹುಲಜಂತಿ ಮಾಳಿಂಗರಾಯರು, ರೈತ ಸಂಘದ ಸಂಗಮೇಶ ಸಗರ, ರಾಹುಲ ಕುಬಕಡ್ಡಿ ಮಾತನಾಡಿ, ಸರ್ಕಾರಗಳು ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ರೈತರ ಉಳಿವಿಗಾಗಿ ಕಾಲುವೆಗಳಿಗೆ ನೀರು ಹರಿಸಬೇಕು, ೭ ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು. ಬಾಕಿ ಇರುವ ಬೆಳೆ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮಾತನಾಡಿ ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಆಗಮನಕ್ಕಾಗಿ ಪಟ್ಟು ಹಿಡಿದರು.
ತಹಶೀಲ್ದಾರ ಪ್ರಕಾಶ ಸಿಂದಗಿ ಧರಣಿ ಸ್ಥಳಕ್ಕೆ ಆಗಮಿಸಿ ರೈತರ ಮನವಲಿಸಿ ಬೇಡಿಕೆಗಳನ್ನು ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದಾಗ ರೈತರು ಮನವಿ ಸಲ್ಲಿಸಿ, ಧರಣಿ ಹಿಂಪಡೆದರು.
ರೇಖಾ ಪಾಟೀಲ, ಗುರಣ್ಣ ಹಂಗರಗಿ, ಶಂಕ್ರೆಪ್ಪ ಸೌದಿ, ಶರಣಗೌಡ ಪಾಟೀಲ(ದೇವೂರ), ಚಿದಾನಂದ ಮೋಪಗಾರ, ಬಾಬಾಸಾಹೇಬಗೌಡ ಪಾಟೀಲ(ಮಣೂರ), ಬಸವರಾಜ ಹುಣಸಗಿ, ಶಂಕರ ರಾಠೋಡ, ರಾಚಯ್ಯ ಹಿರೇಮಠ(ವರ್ಕಾನಳ್ಳಿ), ಮಲ್ಲಪ್ಪ ಸುಂಬಡ, ದ್ಯಾವಪ್ಪಗೌಡ ಪಾಟೀಲ, ಸಿ.ಎಸ್.ಪ್ಯಾಟಿ, ಅಪ್ಪಾಸಾಹೇಬ ಹರವಾಳ, ಗಣೇಶ ಕನ್ನೋಳ್ಳಿ, ರಾಮಗೌಡ ಹುಲಸೂರ, ಶಾಂತಪ್ಪ ದೇವೂರ ಸಂಪತ್ ಜಮಾದಾರ, ಕಾಶೀನಾಥ ಕೋರಿ, ಶಂಕರ ಜಮಾದಾರ ಇದ್ದರು.