ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ದೇಶದ ಶಕ್ತಿಯಾಗಲಿರುವ ಯುವ ಜನತೆ ದುಶ್ಚಟಗಳಿಂದ ದೂರವಿದ್ದು ದೇಶದ ಪ್ರಗತಿಗೆ ಆಸರೆಯಾಗಬೇಕು ಎಂದು ಮದರ್ ತೆರೆಸಾ ಪಿಯು ಕಾಲೇಜಿನ ಪ್ರಾಚಾರ್ಯ ಶಶಿಕಾಂತ ಪತ್ತಾರ ಹೇಳಿದರು.
ಪಟ್ಟಣದ ಮದರ್ ತೆರೆಸಾ ಪದವಿ ಪೂರ್ವ ಕಾಲೇಜಿನಲ್ಲಿ ತಂಬಾಕು ಮುಕ್ತ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಂಬಾಕು ಮುಕ್ತ ಪ್ರತಿಜ್ಞೆ ಬೋಧಿಸಿದ ಬಳಿಕ ಮಾತನಾಡಿದ ಅವರು, ತಂಬಾಕು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ. ಜೊತೆಗೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಉಸಿರಾಟದ ಸಮಸ್ಯೆಗಳಂತಹ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸುವ ಅಮೂಲ್ಯ ಹಂತವಾಗಿದ್ದು, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದಿನ ಯುವಜನರು ಸ್ನೇಹಿತರ ಒತ್ತಡಕ್ಕೆ ತಂಬಾಕು ಸೇವನೆಗೆ ಒಳಗಾಗುವ ಸಂಭವ ಹೆಚ್ಚಿದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರೊಂದಿಗೆ ಕುಟುಂಬ ಮತ್ತು ಸಮಾಜದಲ್ಲಿಯೂ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದ ಅವರು ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ತಾವು ತಂಬಾಕಿನಿಂದ ದೂರವಿರುವುದರ ಜೊತೆಗೆ ಇತರರನ್ನೂ ದುಶ್ಚಟಗಳಿಂದ ದೂರವಿಡಲು ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶಿವಲೀಲಾ ಪಾಟೀಲ, ಪ್ರಶಾಂತ ಅಂಜುಟಗಿ, ವಿಶ್ವನಾಥ ಸಿಂಪಿ, ಅಂಬುಜಾ ಡಾಂಗೆ, ಶಿವಾನಂದ ಮುಗಳಿ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ತಂಬಾಕು ಸೇವನೆ ಮಾಡದಿರಲು ಹಾಗೂ ಇತರರಿಗೂ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪ್ರತಿಜ್ಞೆ ಸ್ವೀಕರಿಸಿದರು.

