ವಿಜಯಪುರ: ನಾಡಹಬ್ಬ ದಸರಾ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿದರು.
ಇಂದು ಬುಧವಾರ ಬೆಳಿಗ್ಗೆಯಿಂದಲೇ ಸಚಿವರ ಗೃಹ ಕಚೇರಿಗೆ ಆಗಮಿಸಿದ ಅಪಾರ ಸಂಖ್ಯೆಯಲ್ಲಿದ್ದ ರೈತರು, ಮುಖಂಡರು, ಸಾರ್ವಜನಿಕರು, ಸಚಿವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಚಿವರಿಗೆ ಬನ್ನಿ ನೀಡಿ ಶುಭ ಕೋರಿದರು. ಇದಕ್ಕೆ ಪ್ರತಿಯಾಗಿ ಸಚಿವರೂ ಕೂಡ ಎಲ್ಲರಿಗೂ ಬನ್ನಿ ನೀಡಿ ಶುಭ ಕೋರಿದರು. ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ಹಿತೈಷಿಗಳು ದಸರಾ ಶುಭಾಷಯ ಕೋರಿದರು.
ಜಗನ್ಮಾತೆ ಬರವನ್ನು ದೂರ ಮಾಡಲಿ. ನಾಡಿನಾದ್ಯಂತ ಸುಖ, ಸಮೃದ್ಧಿ, ನೆಮ್ಮದಿ ನೆಲೆಸುವಂತೆ ಮಾಡಲಿ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಂತಸಮಯ ಜೀವನ ಸಾಗಿಸುವಂತಾಗಲಿ ಎಂದು ಸಚಿವರು ಈ ಸಂದರ್ಭದಲ್ಲಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೆಲವು ರೈತರ ಸಮಸ್ಯೆಗಳಿಗೂ ಸ್ಪಂದಿಸಿದ ಸಚಿವರು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ರೈತರ ನಾನಾ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.
ಗೃಹ ಕಚೇರಿಗೆ ರಾತ್ರಿಯವರೆಗೂ ಆಗಮಿಸಿದ ಸಾರ್ವಜನಿಕರೊಂದಿಗೆ ಸಚಿವ ಎಂ. ಬಿ. ಪಾಟೀಲ ಅವರು ದಸರಾ ಬನ್ನಿ ವಿನಿಮಯ ಮಾಡಿಕೊಂಡರು.
Related Posts
Add A Comment