ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಕುಟುಂಬ ಕಲ್ಯಾಣ ಸೇವೆಗಳು ಸಂಪೂರ್ಣ ಉಚಿತವಾಗಿ ಲಭ್ಯವಿವೆ. ಬಾಲ್ಯ ವಿವಾಹವನ್ನು ತಡೆದು ಸೂಕ್ತ ವಯಸ್ಸಿನಲ್ಲಿ ವಿವಾಹವಾಗಬೇಕು. ಕುಟುಂಬ ಯೋಜನೆ ಪ್ರತಿಯೊಬ್ಬರ ಹಕ್ಕು ಹಾಗೂ ಜವಾಬ್ದಾರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.
ಸಿಂದಗಿ ನಗರದ ಜಿ.ಪಿ.ಪೋರವಾಲ್ ಕಾಲೇಜಿನಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯ ಇಲಾಖೆ, ಜಿ.ಪಿ.ಪೋರವಾಲ ಮಹಾವಿದ್ಯಾಲಯ, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಳದಿಂದ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹೆಚ್ಚುವ ಸಾಧ್ಯತೆ ಇದೆ. ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದ್ದು, ಆರೋಗ್ಯ ಹಾಗೂ ಶಿಕ್ಷಣ ಸೇವೆಗಳ ಮೇಲಿನ ಒತ್ತಡವೂ ಹೆಚ್ಚುತ್ತದೆ ಎಂದರು.
ಈ ವೇಳೆ ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ಮಹಾಂತೇಶ ಹಿರೇಮಠ ಮಾತನಾಡಿ, ಜನಸಂಖ್ಯೆ ಸ್ಫೋಟದಿಂದ ನಿರುದ್ಯೋಗ, ವಸತಿ ಕೊರತೆ, ಮೂಲಸೌಕರ್ಯಗಳ ಮೇಲಿನ ಒತ್ತಡ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಉತ್ತಮ ಜೀವನಶೈಲಿಗಾಗಿ ಕುಟುಂಬ ಯೋಜನೆ ಹಾಗೂ ಶಿಸ್ತುಬದ್ಧ ಜೀವನ ಅಗತ್ಯವಾಗಿದ್ದು, “ನಾವಿಬ್ಬರು ನಮಗಿಬ್ಬರು” ಎಂಬ ಯೋಜನೆಯನ್ನು ಅಳವಡಿಸಿಕೊಂಡರೆ ಕುಟುಂಬದ ಆರೋಗ್ಯ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಸಿಂದಗಿ ಸ್ತ್ರೀರೋಗ ತಜ್ಞೆ ಡಾ.ನೂರಾನಿ ಪಟೇಲ್, ಪ್ರಾಚಾರ್ಯ ಡಾ.ಬಿ.ಎಂ. ಸರಶೆಟ್ಟಿ ಮಾತನಾಡಿದರು. ತಾಲೂಕು ಹಿರಿಯ ನಿರೀಕ್ಷಣಾಧಿಕಾರಿ ಪಿ.ವೈ.ಚೌಡಕಿ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿರೇಂದ್ರ ಪವಾಡೆ, ಗೀತಾ ಸಾಸಾಬಾಳ, ಸಾಯಬಣ್ಣ ಗಂಜಲಿ, ಪ್ರಾಧ್ಯಾಪಕರಾದ ಡಾ.ರವಿ ಗೋಲಾ, ವಿ.ಆರ್.ಪಾಟೀಲ, ಪ್ರಕಾಶ ರಾಠೋಡ, ಡಾ.ಸುಮಾ ನಿರಾಣಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಇದ್ದರು. ಡಾ.ರವಿ ಲಮಾಣಿ ಸ್ವಾಗತಿಸಿದರು. ಬಸವರಾಜ ಮಹಾಜನಶೆಟ್ಟಿ, ಭೀಮಾಶಂಕರ ಅರಳಗುಂಡಗಿ ಕಾರ್ಯಕ್ರಮ ನಿರ್ವಹಿಸಿದರು.

