ಮಹಾರಾಷ್ಟ್ರದ ಗಡಿಗ್ರಾಮದಲ್ಲಿ ಭಾಷಾಭಿಮಾನ ಮೂಡಿಸುವ ನವರಾತ್ರಿ ಸಂಭ್ರಮಕ್ಕೆ ತೆರೆ
- ಸಿದ್ರಾಮ ಮಾಳಿ
ಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೭ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.
ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.
೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟ್ರಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವ ನಾಡದೇವಿಯ ಭಾವಚಿತ್ರದೊಂದಿಗೆ ಪ್ರಭಾತಪೇರಿ ನಡೆಯಿತು. ಮಕ್ಕಳು ರಾಷ್ಟ್ರಧ್ವಜ ಹಿಡಿದು ದೇಶಭಕ್ತಿಯ ಭಾವನೆಯೊಂದಿಗೆ ಪ್ರಭಾತಪೇರಿಯಲ್ಲಿ ಸಾಗಿದರು.
ಕೊನೆಯ ದಿನವಾದ ಮಂಗಳವಾರದಂದು ಪ್ರಭಾತ್ ಪೇರಿ ಗ್ರಾಮದ ಅಂಭಾಭವಾನಿ ದೇವಾಸ್ಥಾನದಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಕುರಿತು ಜಯ ಘೋಷಗಳನ್ನು ಮೊಳಗಿಸುತ್ತಾ ಸಾಗಿದರು.
ಆ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ರಂಗೋಲಿ ಬಿಡಿಸಿ, ದೇವಿಗೆ ನೀರು ಹಾಕಿ, ದೇವಿಯ ಭಾವಚಿತ್ರಕ್ಕೆ ಆರತಿ ಬೆಳಗಿ, ವಿಶೇಷ ಪೂಜೆ ಸಲ್ಲಿಸಿದರು.
ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಪ್ರಭಾತಪೇರಿಯಲ್ಲಿ ಪಾಲ್ಗೊಂಡು ಸಂತಸದಿಂದ ಹೆಜ್ಜೆ ಹಾಕಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರು ಭಾಗಿಗಳಾಗೋಣ ಎಂಬ ಸಂಕಲ್ಪ ಪ್ರತಿಜ್ಞೆ ಕೈಗೊಂಡರು. ರಾಷ್ಟ್ರಗೀತೆಯೊಂದಿಗೆ ಪ್ರಭಾತ್ ಪೇರಿಗೆ ಮಂಗಳ ಹಾಡಲಾಯಿತು.
ಈ ವೇಳೆ ಗ್ರಾಮ ಪಂಚಾಯತ ವತಿಯಿಂದ ಪ್ರಭಾತ ಪೇರಿಯಲ್ಲಿ ಪಾಲ್ಗೊಂಡ ಮಕ್ಕಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಣೆ ಮಾಡಲಾಯಿತು.