ದೀಕ್ಷಾಭೂಮಿ ಯಾತ್ರಾ ರಥಕ್ಕೆ ಚಾಲನೆ ನೀಡಿ ಜಿ.ಪಂ. ಸಿಇಓ ರಾಹುಲ್ ಶಿಂಧೆ ಕರೆ
ವಿಜಯಪುರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಶೈಲಿ ಮತ್ತು ಅವರ ತತ್ವ ಸಿದ್ದಾಂತವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಹೇಳಿದರು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ನಗರದ ಜಲನಗರದ ಬುದ್ಧ ವಿಹಾರ ಆವರಣದಲ್ಲಿ ರವಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳ ದೀಕ್ಷಾಭೂಮಿ ಯಾತ್ರಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಮಹಾನ್ ಜ್ಞಾನಿಗಳು. ಅವರ ಆದರ್ಶ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಹಾಗಾಗಿ ನಾವು ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ ಅವರು ಮಾತನಾಡಿ, ಪ್ರತಿ ವರ್ಷ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ದೀಕ್ಷಾಭೂಮಿ ಯಾತ್ರೆ ಎಂಬ ಕಾರ್ಯಕ್ರಮದಡಿ ಅಂಬೇಡ್ಕರ್ ಅವರು ದೀಕ್ಷೆ ಪಡೆದ ಸ್ಥಳಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈ ವರ್ಷ ೩೦೦ಕ್ಕೂ ಹೆಚ್ಚು ಜನರನ್ನು ಕಳುಹಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಬುದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷರಾದ ರಾಜಶೇಖರ ಯಡಹಳ್ಳಿ, ನಾಗರಾಜ ಲಂಬು, ಅಡಿವೆಪ್ಪ ಸಾಲಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

