ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಮವಾರ ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಹಬ್ಬವನ್ನು ಜನರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಆಯುಧ ಪೂಜೆಗೆ ಬೇಕಾದ ಚೆಂಡು ಹೂ ಸೇರಿದಂತೆ ವಿವಿಧ ಹೂ, ಬಾಳೆಗಿಡ,ಕಬ್ಬಿನ ಜಲ್ಲೆ, ಹಣ್ಣು-
ಹಂಪಲ ಸೋಮವಾರ ಜನರು ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚು ಕಂಡುಬಂದಿತ್ತು. ಪಟ್ಟಣದಲ್ಲಿ ಮಂಗಳವಾರ ವಿಜಯದಶಮಿ ಹಬ್ಬದಂಗವಾಗಿ ಪೂಜೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿದ ಜನರು ಮನೆಯಲ್ಲಿ ತಮ್ಮ ದೇವರಿಗೆ ವಿಶೇಷ ಪೂಜೆಯನ್ನು ಕುಟುಂಬ ಸದಸ್ಯರೊಂದಿಗೆ ನೆರವೇರಿಸಿದರು. ಕೆಲವರು ವಿವಿಧ ದೇವಸ್ಥಾನಗಳಿಗೆ ಹಾಗೂ ಬನ್ನಿ ಗಿಡಗಳಿಗೆ ಪೂಜೆ ಸಲ್ಲಿಸಿ ಧನ್ಯತಾ ಭಾವ ಅನುಭವಿಸಿದರು.
ಕಳೆದ ಒಂಬತ್ತು ದಿನಗಳಿಂದ ನಸುಕಿನ ಜಾವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುತ್ತಾ ಬಂದಿದ್ದ ಮುತ್ತೈದೆಯರು ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ತಮ್ಮ ಪೂಜೆಯನ್ನು ಕೊನೆಗೊಳಿಸಿ ದೇವಿಗೆ ಪೂಜೆ ಸಲ್ಲಿಸಿದರು. ಸಂಜೆ ಕುಟುಂಬ ಸದಸ್ಯರೊಂದಿಗೆ ವಿವಿಧ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದ ನಂತರ ತಮ್ಮ ಸಂಬಂಧಿಕರೊಂದಿಗೆ, ಮಿತ್ರಬಾಂಧವರೊಂದಿಗೆ, ಆತ್ಮೀಯರೊಂದಿಗೆ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ನಾವು ನೀವು ಬಂಗಾರ ತಗೊಂಡ ಬಂಗಾರದಂಗ ಇರೋಣ ಎಂದು ಪರಸ್ಪರ ಹಾರೈಸಿದರು.
Related Posts
Add A Comment