ಬಸವನಬಾಗೇವಾಡಿ: ಅಖಂಡ ಕರ್ನಾಟಕ ರೈತ ಸಂಘ ಹಲವಾರು ಸಲ ಮನವಿ ಸಲ್ಲಿಸಿದ ಮೇರೆಗೆ ನೀರಾವರಿ ಸಲಹಾ ಸಮಿತಿಯು ಮುಂಗಾರು ಹಂಗಾಮಿನ ಬೆಳೆಗಳಿಗೆ ಹಾಗೂ ಕೆರೆಗಳ ಭರ್ತಿಗಾಗಿ ಕಾಲುವೆ ಮೂಲಕ ನೀರು ಹರಿಸಲು ತೀರ್ಮಾನದಂತೆ ಸಧ್ಯ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ತಾಲೂಕಿನ ಹೂವಿನಹಿಪ್ಪರಗಿ ಸಮೀಪದ ಸಂಕನಾಳ ಶಾಖಾ ಕಾಲುವೆಗೆ ನೀರು ಹರಿಸಲಾಗುತ್ತಿದ್ದರೂ ಈ ಭಾಗದ ಅಗಸಬಾಳ ಹಾಗೂ ಹೂವಿನಹಿಪ್ಪರಗಿ ಕೆರೆಗಳಿಗೆ ಇದುವರೆಗೂ ಒಂದು ಹನಿ ನೀರು ತಲುಪಿಲ್ಲ. ಇದರ ಬದಲು ಹಳ್ಳಕ್ಕೆ ನೀರು ಹರಿಸಲಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆಗಳಿಗೆ ನೀರು ಬಾರದೇ ಇರುವುದರಿಂದಾಗಿ ಜಾನುವಾರುಗಳಿಗೆ, ಕುಡಿಯಲು ನೀರಿಗೆ ತತ್ವಾರ ಉಂಟಾಗುತ್ತದೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಎರಡು ಕೆರೆಗಳಿಗೆ ನೀರು ತುಂಬಲು ಪೈಪ್‌ಲೈನ್ ಕಾಮಗಾರಿ ಆರಂಭಿಸಿದರೂ ಈ ಕಾಮಗಾರಿ ವಿಳಂಬವಾಗಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ೨೫೦ ಮೀಟರ್‌ವರೆಗೆ ಹ್ಯಾಳ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಂಡಿದ್ದರೂ ಸಹ ನೀರು ಹ್ಯಾಳಕ್ಕೆ ಬಂದಿಲ್ಲ. ಈ ಭಾಗದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೆಲ ರೈತರು ಕಾಲುವೆ ಒಡೆದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಒಂದಿಬ್ಬರು ರೈತರು ಮಾಡಿದ ತಪ್ಪಿನಿಂದಾಗಿ ಉಳಿದ ನೂರಾರು ರೈತ ಬಾಂಧವರಿಗೆ, ಸಾವಿರಾರು ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಕೆರೆಗಳಿಗೆ ನೀರು ಭರ್ತಿಯಾಗುವಂತೆ ಕ್ರಮ ವಹಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment