ಬಸವನಬಾಗೇವಾಡಿ: ಕಳೆದ 50 ವರ್ಷದಿಂದ ಸಾಮಾಜಿಕ ಹಾಗೂ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ 82 ವರ್ಷದ ವಯೋವೃದ್ಧರಾದ ಸಿಂದಗಿಯ ನಾಡಿನ ಖ್ಯಾತ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರಿಗೆ ಈ ವರ್ಷ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಹಲವಾರು ವರ್ಷಗಳಿಂದ ಮಕ್ಕಳ ಧ್ವನಿಯಾಗಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಾಹಿತ್ಯದ ಮೂಲಕ ತಮ್ಮದೇ ಆದ ಸೇವೆಯನ್ನು ನೀಡುತ್ತಿರುವ ಪೂಜಾರ ಅವರು ಕನ್ನಡ ನಾಡಿನ ಆಸ್ತಿಯಾಗಿದ್ದಾರೆ. ಯಾವುದೇ ಅಪೇಕ್ಷೆಗಳಿಲ್ಲದೇ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರ ಸೇವೆಯನ್ನು ಸರ್ಕಾರ ಗುರುತಿಸಬೇಕು. ಅರ್ಜಿ ಹಾಕದೇ ಇರುವ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುವುದೆಂದು ಸರಕಾರ ಹೇಳಿದೆ. ಈ ನಿಟ್ಟಿನಲ್ಲಿ ಕನ್ನಡ ನಾಡುಗಳಿಗೆ ಸೇವೆ ಸಲ್ಲಿಸಿ ಹಲವಾರು ಮಕ್ಕಳ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಶಂ.ಗು. ಬಿರಾದಾರ ಅವರೊಂದಿಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಯಾವುದೇ ಅಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಈ ಸಲ ಹ.ಮ. ಪೂಜಾರವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದರೆ ರಾಜ್ಯ ಸರ್ಕಾರಕ್ಕೆ ಗೌರವ ಬರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ, ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಪ್ರಯತ್ನಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
Related Posts
Add A Comment