ಕಿತ್ತೂರು ಚನ್ನಮ್ಮಾಜಿಯ ಜಯಂತೋತ್ಸವ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ
ಬಸವನಬಾಗೇವಾಡಿ: ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ಒಂದೇ ಜಾತಿಗೆ ಸೀಮಿತವಾಗಿಲ್ಲ. ಅವಳು ರಾಷ್ಟ್ರದ ಮಹಿಳೆಯಾಗಿದ್ದಾಳೆ. ಅವಳ ಕೆಚ್ಚೆದೆ, ಧೀರತನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಪಂಚಮಸಾಲಿ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ೨೪೫ ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ರಾಣಿ ಝಾಂನ್ಸಿ ಲಕ್ಷ್ಮೀಬಾಯಿ ಅವರು ಶಕ್ತಿಶಾಲಿ ವೀರವನಿತೆಯರು ಎಂಬುವದನ್ನು ಸಾಬೀತು ಪಡಿಸಿದ್ದಾರೆ. ರಾಣಿ ಚನ್ನಮ್ಮ ಆತ್ಮಾಭಿಮಾನದ ಪ್ರತೀಕವಾಗಿದ್ದಾಳೆ. ಇಂತಹ ವೀರವನಿತೆಯರು ಇಡೀ ಸಮಾಜಕ್ಕೆ ಮಾರ್ಗದರ್ಶಿಯಾಗುವ ಮೂಲಕ ಸಮಾಜದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ಪೀಳಿಗೆಗೆ ವೀರರಾಣಿ ಕಿತ್ತೂರು ಚನ್ನಮ್ಮಳ ಸಂದೇಶವನ್ನು ಮುಟ್ಟಿಸುವ ನಿಟ್ಟಿನಲ್ಲಿ ಅವಳ ಮೂರ್ತಿಯನ್ನು ಬಸವನಬಾಗೇವಾಡಿ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದಿಂದ ಪ್ರತಿಷ್ಠಾಪನೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಪಂಚಮಸಾಲಿ ಸಮಾಜ ದೊಡ್ಡದು. ಇಂತಹ ಸಮಾಜದಲ್ಲಿ ಜನಿಸಿದ ವೀರರಾಣಿ ಕಿತ್ತೂರು ಚನ್ನಮ್ಮ ಎಲ್ಲರಿಗೂ ಪ್ರೇರಣಾದಾಯಕವಾಗಿದ್ದಾಳೆ ಎಂದ ಅವರು, ೧೨ ನೇ ಶತಮಾನದಲ್ಲಿ ಎಲ್ಲ ಸಮಾಜಕ್ಕೆ ಸೇರಿದ ಶರಣರನ್ನು ನಾವು ಕಾಣುತ್ತೇವೆ. ಅದೇ ಪಂಚಮಸಾಲಿ ಸಮಾಜಕ್ಕೆ ಸೇರಿದ ಶರಣರು ಇರಬಹುದು. ಈ ನಿಟ್ಟಿನಲ್ಲಿ ಸಂಶೋಧಕರು ಸಂಶೋಧನೆ ಮಾಡಿ ಬೆಳಕು ಚೆಲ್ಲಬೇಕಿದೆ. ಪಂಚಮಸಾಲಿ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ೨ ಎ ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಪಂಚಮಸಾಲಿ ಸಮಾಜದಿಂದ ಆಯ್ಕೆಯಾದ ಶಾಸಕರು ಪಕ್ಷಾತೀತವಾಗಿ ಒಗ್ಗಟ್ಟಿನ ಮಂತ್ರ ಪಠಿಸಿದರೆ ಖಂಡಿತ ಸಮಾಜಕ್ಕೆ ಮೀಸಲಾತಿ ಸಿಗುತ್ತದೆ. ಪಂಚಮಸಾಲಿ ಸಮಾಜದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಈ ಮೂಲಕ ಸಮಾಜದ ಋಣ ತೀರಿಸಬೇಕಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ವಿಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು.
ವಿದ್ಯಾರ್ಥಿ ಪೂರ್ಣಿಮಾ ರವಿ ಚಿಕ್ಕೊಂಡ ಕಿತ್ತೂರು ರಾಣಿ ಚನ್ನಮ್ಮಳ ಕುರಿತು ಮಾರ್ಮಿಕವಾಗಿ ಮಾತನಾಡಿ ಗಮನ ಸೆಳೆದಳು. ಎಚ್.ಬಿ.ಬಾರಿಕಾಯಿ ಸ್ವಾಗತಿಸಿದರು. ಸಿದ್ದು ಬಿರಾದಾರ ನಿರೂಪಿಸಿದರು. ಎಂ.ಬಿ.ತೋಟದ ವಂದಿಸಿದರು.
ಸಮಾರಂಭಕ್ಕೂ ಮುನ್ನ ಇಂಗಳೇಶ್ವರ ರಸ್ತೆಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶ್ರೀಗಳಿಂದ,ಗಣ್ಯರಿಂದ ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಬಸವೇಶ್ವರ ಪ್ರತಿಮೆ, ರಾಣಿ ಚನ್ನಮ್ಮ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಮೆರವಣಿಗೆಯಲ್ಲಿ ಕೀರ್ತಿ ಚಿಕ್ಕೊಂಡ ಅವಳು ವೀರರಾಣಿ ಕಿತ್ತೂರು ಚನ್ನಮ್ಮ ಪೋಷಾಕದಲ್ಲಿ ಕುದುರೆ ಮೇಲೆ ಕುಳಿತು ಗಮನ ಸೆಳೆದಳು. ಮೆರವಣಿಗೆ ಮಾರ್ಗದಲ್ಲಿ ರಂಗವಲ್ಲಿ ಚಿತ್ತಾರ, ಭಾವಚಿತ್ರಕ್ಕೆ ಪುಷ್ಪಾರ್ಚನೆ, ವಿವಿಧ ಮಹಾತ್ಮರ ವೇಷಧಾರಿ ಮಕ್ಕಳು ಕಂಡುಬಂದರು.