ಸೋಮದೇವರಹಟ್ಟಿ ಎಲ್ಟಿ1ರಲ್ಲಿ ದುರ್ಗಾದೇವಿ ಮಹಾದ್ವಾರ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಬಂಜಾರಾ ಸಮುದಾಯದ ಜನ ಶ್ರಮಜೀವಿಗಳು. ಯಾವುದೇ ಜಲಾಶಯ, ಸೇತುವೆ ಸೇರಿದಂತೆ ಕಟ್ಟಡಗಳ ನಿರ್ಮಾಣದಲ್ಲಿ ಬೆವರ ಹನಿ ಇದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್.ಟಿ. 1ರಲ್ಲಿ ದುರ್ಗಾದೇವಿ ಮಹಾದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರಾ ಮಹಿಳೆಯರೂ ಕೂಡ ಶ್ರಮಜೀವಿಯಾಗಿ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಭಕ್ತಿ ಮತ್ತು ಶ್ರದ್ಧೆಗೆ ಈ ಸಮುದಾಯ ಹೆಸರುವಾಸಿಯಾಗಿದ್ದು, ದೇವರನ್ನು ನಂಬಿಕೊಂಡು ಕೆಲಸ ಮಾಡುತ್ತಾರೆ. ಈ ಸಮುದಾಯದ ಈ ಹಿಂದೆಯೂ ನಾನಿದ್ದೆ. ಈಗಲೂ ಇದ್ದೇನೆ. ಮುಂದೆಯೂ ಸದಾಕಾಲ ಇರುತ್ತೇನೆ ಎಂದು ಸಚಿವರು ಹೇಳಿದರು.
ಬಂಜಾರಾ ಸಮುದಾಯಕ್ಕೆ ಸೇರಿದ ಯಾವ ಜನಪ್ರತಿನಿಧಿಗಳೂ ಮಾಡದಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಲಂಬಾಣಿ ತಾಂಡಾಗಳಲ್ಲಿ ಮಾಡಿದ್ದೇನೆ. ನಮ್ಮ ಪ್ರತಿಯೊಂದು ತಾಂಡಾದಲ್ಲಿ ಕನಿಷ್ಠ ರೂ. 50 ಲಕ್ಷ ದಿಂದ ಮೂರ್ನಾಲ್ಕು ಕೋಟಿ ರೂಪಾಯಿ ಅನುದಾನದಲ್ಲಿ ನಾನಾ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಜಯಪುರದಲ್ಲಿ ರೂ.10 ಕೋ. ವೆಚ್ಚದಲ್ಲಿ ಹಾಮುಲಾಲ ದೇವಸ್ಥಾನಕ್ಕೆ ನಿವೇಶನ ನೀಡಿ ಕಟ್ಟಡ ನಿರ್ಮಾಣಕ್ಕೆ ರೂ. 3.50 ಕೋ. ಅನುದಾನ ನೀಡಿದ್ದೇನೆ. ಆದರ್ಶ ನಗರದಲ್ಲಿ ರಾಮರಾವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಿದ್ದೇನೆ ಎಂದು ಅವರು ಹೇಳಿದರು.
ಇದೇ ವೇಳೆ ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಾಡಿ ಕೊಡುವುದಾಗಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದರು.
ಇದೇ ವೇಳೆ ಸಚಿವರು ದುರ್ಗಾದೇವಿ ದೇವಸ್ಥಾನದಲ್ಲಿ ದರ್ಶನ ಪಡೆದರು. ಸಚಿವರನ್ನು ದೇವಸ್ಥಾನದ ಮಹಾರಾಜರು ಸತ್ಕರಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಜಗನು ಮಹಾರಾಜರು, ಮುಖಂಡರಾದ ಡಿ. ಎಲ್. ಚವ್ಹಾಣ, ಸೋಮನಾಥ ಬಾಗಲಕೋಟ, ಅನಿಕೇತ, ಭೀಮು ರಾಠೋಡ ಮುಂತಾದವರು ಉಪಸ್ಥಿತರಿದ್ದರು.