ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಬಂದಿಲ್ಲ | ಕೇಂದ್ರದಲ್ಲೇ ಖುಷಿಯಾಗಿದ್ದೇನೆ | ಪಕ್ಷದ ಕೆಲಸಕ್ಕೆ ನಾವೆಲ್ಲರೂ ಬದ್ಧ
ಬೆಂಗಳೂರು: ಕಳೆದ ಆರು ತಿಂಗಳಿನಿಂದ ಬಿಜೆಪಿ ಪಾಳಯದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಜೋರಾಗಿ ಚರ್ಚೆಯಾಗುತ್ತಿದ್ದು, ಇದೀಗ ಮುನ್ನಲೇ ಬಂದಿದೆ. ಬಿಜೆಪಿ ಮಹಿಳಾ ನಾಯಕಿ ಹಾಗೂ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಹೈಕಮಾಂಡ್ ತಿರ್ಮಾನಿಸಿದೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬಂದಿದೆ.
ಹೌದು, ರಾಜ್ಯ ರಾಜಕಾರಣದಲ್ಲಿ ಮಹಿಳೆಯೋರ್ವಳು ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿಯಬಹುದು ಎಂಬ ಮಾತುಗಳು ದಟ್ಟವಾಗಿದ್ದು, ಈ ಕುರಿತು ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನಗೂ ಯಾವುದೇ ಮಾಹಿತಿ ಬಂದಿಲ್ಲ. ಈಗ ಕೇಂದ್ರದಲ್ಲಿ ಕೃಷಿ ರಾಜ್ಯ ಸಚಿವೆ ಆಗಿದ್ದೇನೆ. ದೇಶದಾದ್ಯಂತ ಪ್ರವಾಸ ಮಾಡುವ ಸುಯೋಗ ಸಿಕ್ಕಿದೆ. ಕೇಂದ್ರದಲ್ಲೇ ಖುಷಿಯಾಗಿದ್ದೇನೆ, ಪಕ್ಷದ ಕೆಲಸಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.
ನನಗೆ ಒಳ್ಳೇ ಖಾತೆ ಸಿಕ್ಕಿದೆ, ಅಲ್ಲಿಯೇ ಒಳ್ಳೇ ಕೆಲಸ ಮಾಡುತ್ತಿದ್ದೇನೆ. ನನಗೆ ವರಿಷ್ಠರಿಂದಲೂ ಯಾವ ಸೂಚನೆ ಬಂದಿಲ್ಲ. ಇಂತಹ ಸುದ್ದಿ ಹೇಗೆ ಬರುತ್ತಿವೆಯೋ ನನಗೆ ಗೊತ್ತಿಲ್ಲ. ಮುಂದೆಯೂ ಮೋದಿ ಪ್ರಧಾನಿಯಾಗಬೇಕು ಎನ್ನುವುದು ನನ್ನ ಇಚ್ಛೆ. ಮೋದಿ ಮತ್ತೆ ಪ್ರಧಾನಿ ಆಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ನಾನು ಪಕ್ಷಕ್ಕೆ ಬಂದು ಈಗ 10 ವರ್ಷ ಆಗುತ್ತಿದೆ ಅಷ್ಟೇ. ಪಕ್ಷದಲ್ಲಿ ನೇಮಕ ವಿಚಾರದಲ್ಲಿ ನಾನು ಹೇಳಲು ಆಗುವುದಿಲ್ಲ. ಶೋಭಾ ಕರಂದ್ಲಾಜೆ ಅವರನ್ನು ಕಾರ್ಯಕರ್ತರು ರಾಜ್ಯ ರಾಜಕಾರಣಕ್ಕೆ ಕರೆಯುತ್ತಿದ್ದಾರೆ. ನಾನು ಅದೇ ಧಾಟಿಯಲ್ಲೇ ಶುಭಾಶಯ ಕೋರಿದ್ದೇನೆ ಅಷ್ಟೇ ಎಂದರು.
ಅದ್ಭುತ ದಸರಾದ ರುವಾರಿಯೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಮೈಸೂರು ಜಿಲ್ಲೆ ಅಭಿವೃದ್ಧಿಗೆ ಶೋಭಾ ಕರಂದ್ಲಾಜೆ ಶ್ರಮಿಸಿದ್ದಾರೆ. ಅವಕಾಶ ಇದ್ದರೆ ರಾಜ್ಯ ರಾಜಕೀಯಕ್ಕೆ ಬನ್ನಿ ಎಂದು ಮನವಿ ಮಾಡಿದ್ದೇವೆ. ಮೇಡಂ ಹುಟ್ಟಿದ ದಿನ ರಾಜ್ಯ ರಾಜಕೀಯಕ್ಕೆ ಬನ್ನಿ ಎಂದು ಹಾರೈಸಿದ್ದೇನೆ. ರಾಜ್ಯ ರಾಜಕೀಯಕ್ಕೂ ಲೋಕಸಭಾ ಚುನಾವಣೆಗೂ ಸಂಬಂಧ ಇಲ್ಲ. ಲೋಕಸಭಾ ಚುನಾವಣೆಯನ್ನು ದೇವರು ಮೋದಿ ಹೆಸರಲ್ಲಿ ಮಾಡ್ತೇವೆ. 25 ಜನ ಸಂಸದರು ನಾವು ಮೋದಿ ಜೀ ಹೆಸರಲ್ಲೇ ಗೆದ್ದು ಬಂದಿರುವುದು. ಆದರೆ ರಾಜ್ಯದಲ್ಲಿ ಬಿಜೆಪಿ ಘಟಕಕ್ಕೆ ಒಳ್ಳೆಯ ನೇತೃತ್ವ ಬೇಕು. ರಾಜ್ಯದಲ್ಲಿ ಹೊಸ ನಾಯಕತ್ವ ಬರಬೇಕೆಂಬ ಅಭಿಲಾಷೆ ಇದೆ ಎಂದು ತಿಳಿಸಿದರು.