ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೫ ನೇ ಪುಣ್ಯ ಸ್ಮರಣೋತ್ಸದ ನಿಮಿತ್ತ ನುಡಿ ನಮನ
ಸಿಂದಗಿ: ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನಲ್ಲಿ ಸಿಂದಗಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಪುರಸಭೆಯ ಸದಸ್ಯರು ತಮ್ಮ ವೇತನದ ಸುಮಾರು ಏಳು ಲಕ್ಷ ರೂಪಾಯಿ ಹಣವನ್ನು ಮೀಸಲಿಟ್ಟಿದ್ದಾರೆ. ಅದಕ್ಕೆ ಹೆಚ್ಚಿನ ಅನುದಾನವನ್ನು ನೀಡಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ್ ಕೂಚಬಾಳ ಶಾಸಕರಿಗೆ ಮನವಿ ಮಾಡಿಕೊಂಡರು.
ಅವರು ಪಟ್ಟಣದ ಶ್ರೀ ಸಂಗಮೇಶ್ವರ ವಿದ್ಯಾಲಯದಲ್ಲಿ ಕನ್ನಡ ಬಳಗ ಮತ್ತು ಅವ್ವಾ ಫೌಂಡೇಶನ್ ಸಿಂದಗಿ ವತಿಯಿಂದ ಹಮ್ಮಿಕೊಂಡ ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೫ ನೇ ಪುಣ್ಯ ಸ್ಮರಣೋತ್ಸದ ನಿಮಿತ್ತದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಲಿಂ. ಸಿದ್ದಲಿಂಗ ಮಹಾಸ್ವಾಮಿಗಳು ಸಾಮಾಜಿಕ ಹರಿಕಾರರಾಗಿ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಮುಂದಾದವರು. ಅವರ ಕಾಯಕನಿಷ್ಠೆ ದಾಸೋಹ ಧರ್ಮ ಅದೊಂದು ಇತಿಹಾಸ. ಅವರು ಸಿಂದಗಿಯವರು ಎನ್ನುವುದೇ ನಮ್ಮೆಲ್ಲರ ಹೆಮ್ಮೆ ಎಂದರು.
ಉಪನ್ಯಾಸ ನೀಡಿದ ಪತ್ರಕರ್ತ ನಾಗೇಶ್ ತಳವಾರ್ ಮಾತನಾಡಿ, ಲಿಂಗೈಕ್ಯ ಶ್ರೀಗಳು ಬಸವಾದಿ ಶಿವಶರಣರ ಸಂದೇಶಗಳನ್ನು ನಾಡಿನ ತುಂಬೆಲ್ಲ ಪ್ರಚಾರ ಮಾಡಿ ಪ್ರಸಾರ ಮಾಡಿ ಬಸವಣ್ಣನ ತತ್ವವನ್ನ ಜೀವನ ಉದ್ದಕ್ಕೂ ಮೈಗೂಡಿಸಿಕೊಂಡು ಆಧುನಿಕ ಬಸವಣ್ಣ ಎನಿಸಿಕೊಂಡವರು. ಕನ್ನಡದ ಜಗದ್ಗುರುವಾಗಿ, ಸಾಮಾನ್ಯರ ಸ್ವಾಮೀಜಿಯಾಗಿ, ಪುಸ್ತಕದ ಸನ್ಯಾಸಿಯಾಗಿ, ದಾಸೋಹ ಮೂರ್ತಿಯಾಗಿ, ಶಿಕ್ಷಣದ ಪ್ರೇಮಿಯಾಗಿ ಈ ಸಮಾಜವನ್ನ ಬೆಳಗಿದ ಶ್ರೀಗಳ ಕಾಯಕ ನಿಜಕ್ಕೂ ಅವರ ಅಮರ. ರೈತರಿಗೆ ಅನ್ಯಾಯವಾದಾಗ ಸರ್ಕಾರದ ವಿರುದ್ಧ ಗುಡುಗಿದ ಸನ್ಯಾಸಿ. ಗೋಕಾಕ್ ಚಳುವಳಿಯ ರೂವಾರಿಗಳಲ್ಲಿ ಶ್ರೀಗಳು ಒಬ್ಬರು. ಕನ್ನಡ ಭಾಷೆಗೆ ಅಗ್ರಸ್ಥಾನ ಎನ್ನುವ ಧ್ವನಿ ಗುಡುಗಿಸಿದವರು ಪೂಜ್ಯರು. ಅವರ ಶ್ರೀ ಮಠ ಜಾತ್ಯತೀತ ನಿಲುವನ್ನ ಹೊಂದಿರುವಂತ ಮಠ ಎಲ್ಲಾ ಸಮಾಜದ ಜನರು ಹಾರೈಸುವಂತ ಶ್ರೀಮಠ ಗದುಗಿನ ತೋಂಟದಾರ್ಯ ಮಠ ಎಂದು ಹೇಳಿದರು.
ಈ ವೇಳೆ ಬಸವ ಸಮಿತಿಯ ಮುಖಂಡ ಶಿವಾನಂದ ಕಲಬುರ್ಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ ಅವ್ವ ಫೌಂಡೇಶನ್ ಸಂಚಾಲಕ ಸಿದ್ದಲಿಂಗ ಕಿಣಗಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸತೀಶ್ ಹಿರೇಮಠ, ಮತ್ತು ಪಟ್ಟಣಶೆಟ್ಟಿ, ಶ್ರೀಧರ್ ಬೊಮ್ಮಣ್ಣಿ, ಸುನಂದ ಎಂಪೂರೆ, ವರ್ಷ ಪಾಟೀಲ್, ಸತೀಶ್ ಹಿರೇಮಠ, ಮಾಲು ಪೂಜಾರಿ, ನಿಂಗಣ್ಣ ಬಂದಾಳ, ಗುರು ಕಡಣಿ, ರಾಜು ನದಾಫ್, ರೇವಣಸಿದ್ಧ ಭಜಂತ್ರಿ, ಜಿಲಾನಿ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.
ಕಾರ್ಯಕ್ರಮದಲ್ಲಿ ರಾಗರಂಜನಿ ಸಂಗೀತ ಅಕಾಡೆಮಿಯ ಸಂಚಾಲಕ ಡಾ. ಪ್ರಕಾಶ ರಾಗರಂಜನಿ ಪ್ರಾರ್ಥಿಸಿದರು, ಉಪನ್ಯಾಸಕ ಅಶೋಕ್ ಬಿರಾದಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ಬಸವರಾಜ ಅಗಸರ ನಿರೂಪಿಸಿದರು, ಶಿಕ್ಷಕ ಗುರುನಾಥ ಅರಳಗುಂಡಗಿ ವಂದಿಸಿದರು.