ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಗೆ ಚಾಲನೆ ನೀಡಿ ಎಡಿಸಿ ಮಹಾದೇವ ಮುರಗಿ ಅಭಿಮತ
ವಿಜಯಪುರ: ನಾಡು-ನುಡಿಗಾಗಿ, ಈ ದೇಶಕ್ಕಾಗಿ ಸಮಾಜದ ಸುಧಾರಣೆಗಾಗಿ, ಸ್ವಾಭಿಮಾನಕ್ಕಾಗಿ ಧೀರೋದಾತ್ತೆತೆಯಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹನೀಯರ ಆದರ್ಶ ವಿಚಾರಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಈ ದೇಶದ ಇತಿಹಾಸ, ಸಮಾಜದ ಸುಧಾರಣೆಗಾಗಿ ಹೋರಾಡಿದ ಮಹನೀಯರ ಬಗ್ಗೆ ಇಂದಿನ ಯುವ ಪೀಳಿಗೆ ಅರಿತುಕೊಳ್ಳುವ ಉದ್ದೇಶದಿಂದ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಿತ್ತೂರು ಚೆನ್ನಮ್ಮ ಅವರು ಮಾಡಿದ ಕಾರ್ಯಗಳಿಂದ ಇತಿಹಾಸದ ಪುಟದಲ್ಲಿ ಅವರು ಅಜರಾಮರವಾಗಿದ್ದಾರೆ. ಇಂತಹ ಮಹನೀಯರ ಕುರಿತಾಗಿ ಅಧ್ಯಯನ ಮಾಡುವ ಮೂಲಕ ಮತ್ತಷ್ಟು ತಿಳಿದುಕೊಳ್ಳಬೇಕು.ಧೈರ್ಯ ಶೌರ್ಯ ಕೆಚ್ಚೆದೆಯ ಹೋರಾಟದ ಕಿತ್ತೂರು ಚೆನ್ನಮ್ಮ ಗುಣಗಳನ್ನು ಅಳವಡಿಸಿಕೊಂಡು ಬೆಳೆಸಿಕೊಂಡಾಗ ಮಾತ್ರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಮಹನೀಯರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಮಾತನಾಡಿ,
ಈ ನೆಲದ ಮಣ್ಣಿನಲ್ಲಿ, ಗಾಳಿಯ ಪರಿಮಳದಲ್ಲಿ, ಅರಿವಿನ ಬೆಳಕಿನಲ್ಲಿ ಇಂದಿಗೂ ಜೀವಕಳೆಯಾಗಿ ಚೆನ್ನಮ್ಮ ಅವರ ಕ್ಷಾತ್ರ ತೇಜಸ್ಸು ತ್ಯಾಗಕ್ಕೆ ಸ್ವಾವಲಂಬನೆಗೆ ಗರುರುತಿಸಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲೂ ಮುಂದೆ ಬಂದು ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು. ಇತಿಹಾಸ ಮುಂಬರುವ ತಲೆಮಾರಿಗೆ ತಲುಪಿಸಬೇಕು. ಅವರ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜಯಂತಿ ಕಾರ್ಯಕ್ರಮದಲ್ಲಿ ವಿರೇಶ ವಾಲಿ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್ ಎಚ್ ನಾಗೂರ, ಮುಖಂಡರಾದ ಬಿ.ಎಂ.ಪಾಟೀಲ, ಶ್ರೀಶೈಲ ಬುಕ್ಕಣಿ, ಸಿದ್ದು ಅವಟಿ, ದಾನೇಶ ಅವಟಿ,ವಿಜಯ ಹಿರೋಳಿ, ನಿಂಗಪ್ಪ ಸಂಗಾಪೂರ, ನಿವೃತ್ತ ಶಿಕ್ಷಕ ಎಚ್.ಮಮದಾಪುರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.