ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಚಿವರು & ಅಧಿಕಾರಿಗಳಿಂದ ಮಾಹಿತಿ ಪಡೆದ ಸಿದ್ದರಾಮಯ್ಯ ಅವರು ಇದೇ ವೇಳೆ, ಹಲವು ಪ್ರಮುಖ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೀಡಿರುವ ಆದೇಶ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಾಗಬೇಕು ಅಂದುಕೊಂಡಿದ್ದವರಿಗೂ ಗುಡ್ ನ್ಯೂಸ್ ಕೊಟ್ಟಿದೆ.
ಜೆಎನ್‌ಯು ನಲ್ಲಿ ಕನ್ನಡ ಅಧ್ಯಯನ ಪೀಠದ ಬಗ್ಗೆ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು. ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳು ಭಿನ್ನ ಅವಧಿಗೆ ನಡೆಯುವುದರಿಂದ ಅಭ್ಯರ್ಥಿಗಳಿಗೆ ಅನಾನುಕೂಲ ಆಗುವುದರಿಂದ, ಏಕರೂಪದ ಕ್ಯಾಲೆಂಡರ್ ಆಫ್ ಇವೆಂಟ್ಸ್ ಜಾರಿಗೊಳಿಸಲು ಸೂಚಿಸಿದರು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪರಿಷತ್ತು ಕಾರ್ಯ ನಿರತವಾಗಿದೆ ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು.
ಶಿಕ್ಷಣ ಕ್ಷೇತ್ರದ ಗುಣಮಟ್ಟ ಕಾಯ್ದುಕೊಳ್ಳಲು ಬೋಧಕ ಸಿಬ್ಬಂದಿ ನೇಮಕ ಅತಿ ಅಗತ್ಯವಾಗಿದೆ. ಈ ಹಿನ್ನೆಲೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ & ಬ್ಯಾಕ್‌ಲಾಗ್ ಹುದ್ದೆಗಳನ್ನು ಮೊದಲಿಗೆ ಭರ್ತಿ ಮಾಡುವಂತೆ ಹಾಗೂ ನಂತರ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಕುರಿತು ಆದ್ಯತೆಗಳನ್ನು ಗುರುತಿಸಿ ಕ್ರಮ ವಹಿಸುವಂತೆ ಹಣಕಾಸು & ಉನ್ನತ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ LMS ವ್ಯವಸ್ಥೆ ಜಾರಿಗೆ ಬಂದಿರುವ ಕಾರಣದಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್ ವಿತರಿಸುವ ಬಗ್ಗೆ, ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಸ್ಟೈಫೆಂಡ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮೈಸೂರು ಮಹಾರಾಣಿ ಆರ್ಟ್ಸ್ ಕಾಲೇಜು ಹಾಸ್ಟೆಲ್ ಆವರಣದಲ್ಲಿ 99 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಆರ್ಟ್ಸ್ & ವಿಜ್ಞಾನ ಕಾಲೇಜಿನ ತಲಾ ಸಾವಿರ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸುವ ಹಾಸ್ಟೆಲ್ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು.
ಎಂಜಿನಿಯರಿಂಗ್ ಕಾಲೇಜು ಸುಧಾರಣೆಗೆ ಸೂಚನೆ
ಬಹುತೇಕ ಮಕ್ಕಳು ಬಡ, ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದಾರೆ ಇವರ ಅನುಕೂಲಕ್ಕೆ ಸುಸಜ್ಜಿತ ಹಾಸ್ಟೆಲ್ ನಿರ್ಮಿಸುವ ಅಗತ್ಯವಿದೆ. ಈ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ತಮ್ಮ ಹಿಂದಿನ ಅವಧಿಯಲ್ಲಿ ಆಯವ್ಯಯದಲ್ಲಿ ಅನುದಾನ ಘೋಷಿಸಿದ್ದನ್ನು ಸಿಎಂ ಸ್ಮರಿಸಿದರು. ರಾಜ್ಯದ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸುಧಾರಣೆಗೆ ಆದ್ಯತೆ ನೀಡುವಂತೆ ಸಿಎಂ ಸೂಚಿಸಿದರು. ವಿಶ್ವವಿದ್ಯಾಲಯಗಳು ವಿಭಜನೆಯಾಗಿರುವುದರಿಂದ ಹಳೆಯ 5 ವಿಶ್ವವಿದ್ಯಾಲಯಗಳ ಪಿಂಚಣಿ ವಿತರಣೆ ಸಮಸ್ಯೆ ಕುರಿತು ಚರ್ಚಿಸಲಾಯಿತು.
Related Posts
Add A Comment