- ಡಾ. ರಾಜಶೇಖರ ನಾಗೂರ
ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಅಂಗಳದಲ್ಲಿ 1935 ರ ಸಮಯ, ಅಂದಿನ ರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಒಮ್ಮೆಲೆ ತನಗೆ ಏನಾದರು ಸಿಹಿ ತಿನ್ನಬೇಕು ಎನಿಸುತ್ತಿದೆ ಹೀಗಾಗಿ ಏನಾದರೂ ಹೊಸ ಸಿಹಿ ತಿಂಡಿಯನ್ನು ಮಾಡಿ ಎಂದು ತಮ್ಮ ಅಡುಗೆ ಭಟ್ಟ ಶ್ರೀ ಕಾಕಾಸುರ ಮಾದಪ್ಪನಿಗೆ ಹೇಳಿದರು.
ತಕ್ಷಣವೇ ಹೊಸ ಸಿಹಿ ಖಾದ್ಯ ಏನು ಮಾಡಬೇಕು ಎಂಬುದು ಆ ಭಟ್ಟನಿಗೆ ಹೊಳೆಯಲಿಲ್ಲ . ಏನೋ ಒಂದು ಪ್ರಯೋಗ ಮಾಡೋಣ ಎಂದುಕೊಂಡು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆಯೊಂದಿಗೆ ಮನಸಿಗೆ ತಿಳಿದ ಹಾಗೆ ಖಾದ್ಯವೊಂದನ್ನು ಸಿದ್ಧಪಡಿಸಿ ನೇರವಾಗಿ ತಂದು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ತಿನ್ನಿಸಿದ. ಅದನ್ನು ತಿಂದ ನಾಲ್ವಡಿ ಕೃಷ್ಣರಾಜ ಒಡೆಯರು ತುಂಬಾ ಸಂತೋಷವನ್ನು ವ್ಯಕ್ತಪಡಿಸಿದರು. “ಎಷ್ಟು ಅದ್ಭುತವಾಗಿದೆ ಈ ಸಿಹಿ. ಇದರ ಹೆಸರೇನು” ಎಂದು ಕೇಳಿದರು. ಅದನ್ನು ತಯಾರಿಸಿದ ಶ್ರೀ ಕಾಕಾಸುರ ಮಾದಪ್ಪನಿಗೂ ಆ ಖಾದ್ಯದ ಹೆಸರೇನೆಂದು ಗೊತ್ತಿರಲಿಲ್ಲ. ಆಗ ಸ್ವತಃ ಕಾಕಾಸುರನು “ಮಹಾರಾಜರೇ ಈ ಖಾದ್ಯದ ಹೆಸರು ನನಗೂ ಗೊತ್ತಿಲ್ಲ. ನೀವೇ ಒಂದು ಹೆಸರಿಡಿ” ಎಂದ. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಇದು “ಮೈಸೂರುಪಾಕ” ವಾಗಲಿ ಎಂದು ಹೆಸರಿಟ್ಟು ಕರೆದರು. ಅಂದಿನಿಂದ ಇಂದಿನವರೆಗೆ ಜಗತ್ಪ್ರಸಿದ್ಧ ಸಿಹಿ ಖಾದ್ಯ “ಮೈಸೂರು ಪಾಕ” ಎಂದು ಹೆಸರುವಾಸಿಯಾಗಿ ಉಳಿದಿದೆ. ಅಷ್ಟೇ ಅಲ್ಲ ಜಗತ್ತಿನ ಅತಿಪ್ರಸಿದ್ಧ ಮೊದಲ 50 ಸಿಹಿ ಖಾದ್ಯಗಳಲ್ಲಿ ‘ಮೈಸೂರುಪಾಕ’ 14ನೇಯ ಸ್ಥಾನವನ್ನು ಪಡೆದು ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ.