ವಿಜಯಪುರದಲ್ಲಿ ಪೊಲೀಸ್ ಹುತಾತ್ಮ ದಿನ ಆಚರಣೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿಕೆ
ವಿಜಯಪುರ: ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತಾ ಸಮಾಜದ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರಾಣ ಮುಡುಪಾಗಿಟ್ಟ ಪೊಲೀಸ್ ಅವರನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿ, ಮಾತನಾಡಿದ ಅವರು, ನಮ್ಮ ರಕ್ಷಣೆ ಮಾಡುವ ಸಂದರ್ಭ ಹೋರಾಡಿ ತಮ್ಮ ಜೀವನ ತ್ಯಾಗ ಮಾಡಿದ ಪೊಲೀಸರಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ದಿನ ಗೌರವ ನಮನ ಸಲ್ಲಿಸಲಾಗುತ್ತಿದೆ. ೧೯೫೯ರಲ್ಲಿ ಚೀನಿ ಪಡೆಗಳೊಂದಿಗೆ ನಡೆದ ಹೋರಾಟದಲ್ಲಿ ತಮ್ಮ ಜೀವನ ತ್ಯಾಗ ಮಾಡಿದ ಪೊಲೀಸ್‌ರನ್ನು ಸ್ಮರಿಸುವ ಈ ದಿನ ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದೆ. ಸೈನಿಕರು ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಾರೆ. ಸಾರ್ವಜನಿಕರು ಜನರ ಆಸ್ತಿ-ಪಾಸ್ತಿ ರಕ್ಷಣೆಗಾಗಿ ತಮ್ಮ ಜೀವನ ತ್ಯಾಗ ಮಾಡಿರುವ ಹಾಗೂ ನೆಮ್ಮದಿಯಾಗಿ ಶಾಂತಿಯಿಂದ ಜೀವನ ನಡೆಸಲು ಒಳನಾಡಿನಲ್ಲಿ ಪೊಲೀಸ ಕಾರ್ಯ ಅನನ್ಯವಾಗಿದೆ. ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.
ಹಗಲಿರುಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ಹೋರಾಡಿ, ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ಜಿಲ್ಲೆಯ ಸಿಪಿಐ ರವಿ ಉಕ್ಕುಂದ ಅವರ ಕಾರ್ಯವನ್ನು ಸ್ಮರಿಸಿದ ಅವರು, ಯಶಸ್ವಿ ಪೊಲೀಸ್ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ನೆಲೆಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ, ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ಪೊಲೀಸ ಇಲಾಖೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆಯು ಸೇರಿದಂತೆ ಎಲ್ಲರೂ ಕೈಜೋಡಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುತ್ತ, ಜನರ ಸಂಧಿಗ್ಧ ಹಾಗೂ ಕಷ್ಟಕಾಲದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಪೊಲೀಸರ ಸ್ಮರಣೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ದೇಶದ ರಕ್ಷಣೆ ಜನರ ನೆಮ್ಮದಿಗಾಗಿ ಹಾಗೂ ಉತ್ತಮ ಆಡಳಿತ ಕಟ್ಟಿಕೊಡುವಲ್ಲಿ ಪೊಲೀಸ್ ಕರ್ತವ್ಯ ಬಹು ಮುಖ್ಯವಾಗಿದೆ. ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಮಾತನಾಡಿ, ೧೯೫೯ರ ಚೀನಾ ಯುದ್ಧದಲ್ಲಿ ವೀರಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಪ್ರತಿ ವರ್ಷ ಅ.೨೧ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಪೊಲೀಸರು ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ರಕ್ಷಣೆ ಸಂದರ್ಭದಲ್ಲಿ ಕಾರ್ಯ ನಿರ್ವಹಣೆಯಲ್ಲಿ ಹೋರಾಡಿ ಜೀವನ ತ್ಯಾಗ ಮಾಡಿದ ಪೊಲೀಸ್‌ರಿಗೆ ಗೌರವ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಅರ್ಜುನ ಭಜಂತ್ರಿ ತಂಡ ಪೋಲಿಸ್ ಬ್ಯಾಂಡ್ ಮೂಲಕ ಗೀತೆ ಹಾಗೂ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಬಸವರಾಜ್ ಎಲಿಗಾರ, ಜಿಲ್ಲೆಯ ವಿವಿಧ ಪೊಲೀಸ್ ವಿಭಾಗದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಪರೇಡ ಕಮಾಂಡರ್ ಎಸ್ ಆರ್ ವನಂಜಕರ್ ಅವರು ಶಿಸ್ತು ಬದ್ಧ ಪೊಲೀಸ ಪರೇಡ್ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ಮಮದಾಪೂರ, ದಶರತ್ ಕಾರ್ಯಕ್ರಮ ನಿರ್ವಹಿಸಿದರು.

